ನವದೆಹಲಿ: ಮುಬರಲಿರುವ ಲೋಕಸಭೆ ಚುನಾವಣೆಯೊಂದಿಗೆ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯನ್ನೂ ಚುನಾವಣಾ ಆಯೋಗ ನಡೆಸಲು ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರ ವಿಧಾನಸಭೆಗೆ 2019ರ ಮೇ 21ರೊಳಗೆ ಚುನಾವಣೆ ನಡೆಸಬೇಕಿದ್ದು, ಲೋಕಸಭೆ ಚುನಾವಣೆಯೊಂದಿಗೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ನವೆಂಬರ್ 21ರಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಫಾಲ್ ಮಲ್ಲಿಕ್ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ್ದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ವಿಧಾನಸಭೆ ವಿಸರ್ಜನೆ ಬಳಿಕ 6 ತಿಂಗಳ ಒಳಗೆ ಚುನಾವಣೆ ನಡೆಸಕಿದೆ. ಅದರಂತೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಲು 2019 ಮೇ 21 ಅಂತಿಮ ದಿನವಾಗಿದೆ. ಅದೇ ವೇಳೆಗೆ ಲೋಕಸಭೆಯ ಅವಧಿಯೂ ಸಹ ಮುಗಿಯುವುದರಿಂದ ಸಾರ್ವತ್ರಿಕ ಚುನಾವಣೆಯೊಂದಿಗೆ ಕಾಶ್ಮೀರ ಚುನಾವಣೆ ನಡೆಸುವ ಸಾಧ್ಯತೆ ಇದೆ.
ಬಿಜೆಪಿಯನ್ನು ಅಧಿಕಾರದಿಂದ ದೂರು ಇರಿಸಬೇಕೆಂಬ ಅಜೆಂಡಾದೊಂದಿಗೆ ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಸರಕಾರ ರಚಿಸಲು ಮುಂದಾದ ಬೆನ್ನಲ್ಲೇ ರಾಜ್ಯಪಾಲರು ನವೆಂಬರ್ 21ರಂದು ವಿಧಾನಸಭೆ ವಿಸರ್ಜನೆ ಮಾಡಿ ಆದೇಶ ಹೊರಡಿಸಿದ್ದರು. ಪಿಡಿಪಿಯ ಮೆಹಬೂಬಾ ಮುಫ್ತಿ ಸರಕಾರ ರಚಿಸಲು ಅವಕಾಶ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರಾದರೂ, ಅದನ್ನು ಸ್ವೀಕರಿಸುವ ಮೊದಲೇ ರಾಜ್ಯಪಾಲರು ವಿಧಾನಸಭೆ ವಿಸರ್ಜನೆ ಆದೇಶ ಹೊರಡಿಸಿದ್ದರು.