ಮೂಲವ್ಯಾಧಿಯ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆಗಳು

ಮೂಲವ್ಯಾಧಿಯೆಂದರೆ ಅಂಗಾಂಶ ಇಲ್ಲವೇ ರಕ್ತನಾಳಗಳು ಒಟ್ಟಾಗಿ ಸಹಜ ಗಾತ್ರಕ್ಕಿಂತ ಹೆಚ್ಚಾಗಿ ಊದಿಕೊಳ್ಳುವುದು. ಶೇ. 50ರಷ್ಟು ಜನರು 50ನೇ ವಯಸ್ಸು ತಲುಪುವಷ್ಟರಲ್ಲಿ ಮೂಲವ್ಯಾಧಿ ಸಮಸ್ಯೆಗೆ ತುತ್ತಾಗುತ್ತಾರೆ. ಆದರೆ, ಈ ಸಮಸ್ಯೆಯನ್ನು ನಿವಾರಿಸಬಹುದು, ನಿಯಂತ್ರಿಸಬಹುದು.

ಮೂಲವ್ಯಾಧಿಗೆ ಕಾರಣವೇನು?

ಮನುಷ್ಯನ ವಯಸ್ಸು ಹೆಚ್ಚುತ್ತಿದ್ದಂತೆ ಆತ ಮೂಲವ್ಯಾಧಿಗೆ ತುತ್ತಾಗುವ ಸಾಧ್ಯತೆ ಜಾಸ್ತಿ ಇದೆ. ಇದಕ್ಕೆ ಕಾರಣವಾಗುವ ಸಹಜ ಸಮಸ್ಯೆಗಳೆಂದರೆ, ಮಲಬದ್ಧತೆ. ಇದು ಮನುಷ್ಯನ ವಯಸ್ಸು ಹೆಚ್ಚಿದಂತೆಲ್ಲಾ ಜಾಸ್ತಿಯಾಗುತ್ತದೆ. ತೀವ್ರ ಮಲಬದ್ಧತೆ, ತೀವ್ರ ಅತಿಸಾರ, ನಿರಂತಹ ಅತಿ ಭಾರ ಎತ್ತುವುದು, ಗರ್ಭಾವಸ್ಥೆಯ ಸಮಯದಲ್ಲಿ ಇಲ್ಲವೇ ಮಲವಿಸರ್ಜನೆಗೆ ಕಷ್ಟಪಡುವ ಪರಿಸ್ಥಿತಿಗಳಲ್ಲಿ ಮೂಲವ್ಯಾಧಿ ಕಾಣಿಸಿಕೊಳ್ಳುತ್ತದೆ. ಇದು ಅನುವಂಶೀಯ ಕೂಡ ಅಗಿರಬಹುದು. ಇದು ಸಾಮಾನ್ಯವಾಗಿ ವೈದ್ಯರ ಚಿಕಿತ್ಸೆಯ ನಂತರ ಪತ್ತೆಯಾಗುತ್ತದೆ.

ಮೂಲವ್ಯಾಧಿಯ ಲಕ್ಷಣಗಳು

ಮೂಲವ್ಯಾಧಿಯ ಕೆಲ ಲಕ್ಷಣಗಳೆಂದರೆ,  ನಿಮ್ಮ ಹೊಟ್ಟೆ ಯಾವಾಗಲೂ ತುಂಬಿದೆ ಎನ್ನಿಸುತ್ತದೆ. ಮಲ ವಿಸರ್ಜನೆ ಸಮಯದಲ್ಲಿ ರಕ್ತಸ್ತ್ರಾವ, ಗುಪ್ತಾಂಗದ ಸುತ್ತ ತುರಿಸುವಿಕೆ, ಕೆಂಪಾಗುವುದು, ಮಲ ವಿಸರ್ಜನೆ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಲುತ್ತದೆ. ಮೂಲವ್ಯಾಧಿಯಿಂದ ಬಳಲುತ್ತಿರುವ ವ್ಯಕ್ತಿ ಗುಪ್ತಾಂಗದ ಸುತ್ತ ಕೆಲವೊಮ್ಮೆ ರಕ್ತ ಹೆಪ್ಪುಕಟ್ಟುವಿಕೆ ಇಲ್ಲವೇ ಗೆಡ್ಡೆಗಳು ಕಾಣಿಸಿಕೊಳ್ಳುತ್ತವೆ.

ಮುನ್ನೆಚ್ಚರಿಕೆ ಹಾಗೂ ಮೂಲವ್ಯಾಧಿಯ ನಿರ್ವಹಣೆ

ಅನೇಕರಿಗೆ ಮೂಲವ್ಯಧಿ ತಾನಾಗಿಯೇ ಗುಣವಾಗುತ್ತದೆ. ಅದಕ್ಕಾಗಿ ಅವರು ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಹೆಚ್ಚಿನ ನಾರಿನಂಶವುಳ್ಳ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಹೊಟ್ಟೆ ಹಾಗೂ ಕರುಳಿನ ಚಟುವಟಿಕೆಗೆ ಅಡ್ಡಿಯುಂಟಾದಲ್ಲಿ ಮೂಲವ್ಯಾಧಿ ಕಾಣಿಸಿಕೊಳ್ಳುತ್ತದೆ. ಇದು ಮಲಬದ್ಧತೆಗೆ ಕಾರಣವಾಗುತ್ತದೆ. ಮೂಲವ್ಯಾಧಿಯಿಂದ ಬಳಲುತ್ತಿರುವರು ತಮ್ಮ ಆಹಾರ ಕ್ರಮವನ್ನು ಬದಲಿಸಿಕೊಂಡು ನಾರಿನಂಶ ಇರುವ ಆಹಾರಗಳನ್ನು ಸೇವಿಸಿದಲ್ಲಿ ಮಲವಿಸರ್ಜನೆ ಸುಲಭವಾಗುತ್ತದೆ. ಹಣ್ಣು, ತರಕಾರಿ ಹಾಗೂ ಕಾಳುಗಳಲ್ಲಿ ನಾರಿನಂಶ ಹೆಚ್ಚಿರುತ್ತದೆ.

ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ಜನರು ಹೆಚ್ಚಾಗಿ ಮೂಲವ್ಯಾಧಿ ಸಮಸ್ಯೆಗೆ ಗುರಿಯಾಗುತ್ತಾರೆ. ಅವರು ತಮ್ಮ ತೂಕ ಇಳಿಸಿಕೊಂಡಲ್ಲಿ ಇದಕ್ಕೆ ಪರಿಹಾರ ಪಡೆಯಬಹುದು. ಈ ಪ್ರಕ್ರಿಯೆ ಸಮತೋಲಿನ ಆಹಾ ಹಾಗೂ ನಿಯಮಿತ ವ್ಯಾಯಾಮಗಳನ್ನು ಒಳಗೊಂಡಿರಬೇಕು.

ಮೂಲವ್ಯಾಧಿ ತಡೆಯಲು ಔಷಧಗಳು

ಮೂಲವ್ಯಾಧಿಯ ಲಕ್ಷಣಗಳನ್ನು ಔಷಧಗಳಿಂದ ತಡೆಯಬಹುದು. ನೋವು ನಿವಾರಕ ಔಷಧಿಗಳು, ಮುಲಾಮು, ಕ್ರೀಮ್ ಹಾಗೂ ಪ್ಯಾಡ್‍ಗಳ ನೆರವಿನಿಂದ ಗುಪ್ತಾಂಗದ ಸುತ್ತಮುತ್ತಲಿನ ಕೆಂಪಾಗುವುದು ಹಾಗೂ ಊದುವುದನ್ನು ತಡೆಯುತ್ತದೆ. ಆದರೆ, ಇವುಗಳು ಕೇವಲ ಮೂಲವ್ಯಾಧಿಯ ಲಕ್ಷಣಗಳನ್ನು ತಡೆಯುತ್ತವೆಯೇ ಹೊರತು ಕಾಯಿಲೆಯನ್ನಲ್ಲ ಎಂಬುದನ್ನು ಜನರು ಮರೆಯಬಾರದು. ಮಲಬದ್ಧತೆಯಿಂದ ಮೂಲವ್ಯಾಧಿಗೆ ತುತ್ತಾಗಿರುವರಿಗೆ ವೈದ್ಯರು ಮಲವಿಸರ್ಜನೆಯ ಔಷಧವನ್ನು ಕೂಡ ಸಲಹೆ ನೀಡಬಹುದು. ಇದು ರೋಗಿಯ ಕರುಳಿನ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ.

ಮೂಲವ್ಯಾಧಿಗೆ ಶಸ್ತ್ರಚಿಕಿತ್ಸೆಗಳು

ಮೂಲವ್ಯಾಧಿಯಿಂದ ಬಳಲುತ್ತಿರುವ ಶೇ.10ರಷ್ಟು ರೋಗಿಗಳಿಗೆ ಮಾತ್ರ ಶಸ್ತ್ರಚಿಕತ್ಸೆ ಬೇಕಾಗುತ್ತದೆ. ಮೂಲವ್ಯಾಧಿಗೆ ಹಲವು ಸುಧಾರಿತ ಚಿಕಿತ್ಸೆಗಳಿವೆ. ಇದರಲ್ಲಿ ಒಂದು ಲೇಸರ್ ಸರ್ಜರಿ ಇದು ಮೂಲವ್ಯಾಧಿಯನ್ನು ಚಿಕ್ಕದಾಗಿಸಿ, ತೆಗೆದುಬಿಡುತ್ತದೆ. ಇದನ್ನು ನೀವು ವೈದ್ಯರ ಕ್ಲಿನಿಕ್‍ನಲ್ಲೇ ಮಾಡಬಹುದು. ಮತ್ತೊಂದು ಸುಧಾರಿತ ಚಿಕಿತ್ಸೆಯೆಂದರೆ, ಗ್ರೇಡ್ 2 ಹಾಗೂ ಗ್ರೇಡ್ 3ರ ಮೂಲವ್ಯಾಧಿಗೆ ಡಿಜಿ-ಆರ್‍ಎಆರ್ ಚಿಕಿತ್ಸೆ. ಇದು ಮೂಲವ್ಯಾಧಿಯ ಪದರಗಳ ಕಡೆ ರಕ್ತ ಸಂಚಾರವನ್ನು ತಡೆಯುತ್ತದೆ. ಪರಿಣಾಮವಾಗಿ, ಅದು ಮೂಲವ್ಯಾಧಿಯ ಗೆಡ್ಡೆಗಳನ್ನು ಚಿಕ್ಕದಾಗಿಸುತ್ತದೆ. ಇದು ಕೇವಲ 30 ನಿಮಿಷದ ಚಿಕಿತ್ಸೆಯಾಗಿತ್ತು, ಶಸ್ತ್ರಚಿಕಿತ್ಸೆಯ 24 ಗಂಟೆಗಳ ಅವಧಿಯಲ್ಲಿ ರೋಗಿ ಆಸ್ಪತ್ರೆಯಿಂದ ಮನೆಗೆ ಹೋಗಬಹುದು.

ರಕ್ತನಾಳದ ಊದುವಿಕೆ ನಿವಾರಣೆ ಇಲ್ಲವೇ ಪಿಪಿಎಚ್ ಕೂಡ ಇನ್ನೊಂದು ಸುಧಾರಿತ ಚಿಕಿತ್ಸೆ. ಇದನ್ನು ಸ್ಟೇಪಲ್ಸ್ ಹ್ಯಾಮೊರಾಯ್ಡ್‍ಡೆಕ್ಟೋಮಿ ಎಂದು ಕೂಡ ಕರೆಯುತ್ತಾರೆ. ಈ ಪ್ರಕ್ರಿಯೆಯಲ್ಲಿ ವೈದ್ಯರು ಸ್ಟ್ಯಾಪ್ಲರ್ ಅನ್ನು ಉಪಕರಣವಾಗಿ ಬಳಸಿ ಊದಿದ ರಕ್ತನಾಳಕ್ಕೆ ರಕ್ತಸಂಚಾರವನ್ನು ಸ್ಥಗಿತಗೊಳಿಸುತ್ತಾರೆ. ರಕ್ತಸಂಚಾರ ಇಲ್ಲದಿದ್ದಾಗ, ರಕ್ತನಾಳಗಳು ಸತ್ತುಹೋಗುತ್ತವೆ. ಇನ್ನೊಂದು ಹೊಸ ಶಸ್ತ್ರಚಿಕಿತ್ಸೆಯೆಂದರೆ ರೇಡಿಯೋಫ್ರೀಕ್ವೆನ್ಸಿ ಅಂಗಚ್ಛೇದನ. ಇದರಲ್ಲಿ ಹೆಚ್ಚಿನ ಕಂಪನಾಂಕವುಳ್ಳ ರೇಡಿಯೋವೇವ್ ಶಕ್ತಿಯನ್ನು ಬಳಸಿಕೊಂಡು ಅಂಗಾಂಶಗಳನ್ನು ಹೊರತೆಗೆಯುತ್ತಾರೆ. ಕೊನೆಯದಾಗಿ ಐಆರ್‍ಸಿ ಇಲ್ಲವೇ ಅವರಕ್ತ ಘನೀಕರಣ ಚಿಕಿತ್ಸೆ ಕೂಡ ಒಂದು ನೋವುರಹಿತ ಹಾಗೂ ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸೆ ಹೆಚ್ಚಾಗಿ ಬಳಕೆಯಾಗುತ್ತದೆ. ಇದು ರಕ್ತನಾಳದ ಊದುವಿಕೆಗೆ ಕಾರಣವಾದ ಅಂಗಾಂಶವನ್ನು ಹೊರತೆಗೆದು ಊದುವಿಕೆಯನ್ನು ಕಡಿಮೆಮಾಡುತ್ತದೆ.

ಲೇಖಕರು
ಡಾ. ಪರಮೇಶ್ವರ್  ಸಿ.ಎಂ
ಕೊಲೊರೆಕ್ಟಲ್ ಸರ್ಜನ್
ಬೆಂಗಳೂರು ಸ್ಮೈಲ್ಸ್ ಆಸ್ಪತ್ರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ