ಬೆಂಗಳೂರು, ನ.29- ಲಾರಿಯಲ್ಲಿ ಮಲಗಿದ್ದ ಚಾಲಕನನ್ನು ಭೀಕರವಾಗಿ ಕೊಲೆ ಮಾಡಿ ಹಣ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ತೌಹೀದ್ ಅಲಿಯಾಸ್ ವರ್ದಾ, ಮುದಸ್ಸಿರ್ ಮತ್ತು ಸಲ್ಮಾನ್ ಬಂಧಿತ ಆರೋಪಿಗಳು.
ನ.3ರಂದು ರಾತ್ರಿ ತಲಘಟ್ಟಪುರದ 80 ಫೀಟ್ ರಸ್ತೆ ಬಳಿ ನಿಲ್ಲಿಸಿದ್ದ ಲಾರಿಯಲ್ಲಿ ಚಾಲಕ ಭಾಸ್ಕರ್ (44) ಹತ್ಯೆಯಾಗಿದ್ದರು.
ಈ ಬಗ್ಗೆ ಪ್ರಕರಣ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ತಲಘಟ್ಟಪುರ ಹಾಗೂ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.
ಡಿಸಿಪಿ ಅವರ ಸಲಹೆ- ಸೂಚನೆಯಂತೆ ಪೊಲೀಸರೇ ಲಾರಿ ಚಾಲಕರ ವೇಷದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.ಎಸಿಪಿ ಮಹದೇವ್ ನೇತೃತ್ವದಲ್ಲಿ ಇಬ್ಬರು ಇನ್ಸ್ಪೆಕ್ಟರ್ಗಳು, ಸಿಬ್ಬಂದಿ ಆರೋಪಿಗಳ ಪತ್ತೆಗೆ ಎರಡು ಲಾರಿಗಳನ್ನು ಪಡೆದು ರಾತ್ರಿ ವೇಳೆ ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಿದ್ದರು.ಆದರೆ, ಇವರನ್ನು ಲಾರಿ ಚಾಲಕರೆಂದೇ ತಿಳಿದ ಆರೋಪಿಗಳು ದರೋಡೆ ಮಾಡಲು ಮುಂದಾಗಿದ್ದಾರೆ.ಈ ವೇಳೆ ಪೊಲೀಸರು ಬೀಸಿದ ಬಲೆಗೆ ಆರೋಪಿಗಳು ಬಿದ್ದಿದ್ದಾರೆ.
ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಲಾರಿ ಚಾಲಕ ಭಾಸ್ಕರ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಣಕ್ಕಾಗಿ ಲಾರಿ ಚಾಲಕನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಸಬ್ಇನ್ಸ್ಪೆಕ್ಟರ್ ಸುಬ್ರಹ್ಮಣಿ, ಸಿಬ್ಬಂದಿ ಮಹೇಶ್, ಪ್ರದೀಪ್ ಹಾಗೂ ಇತರೆ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.ಪೊಲೀಸರ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.