ಬೆಂಗಳೂರು,ನ.29- ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತಂತೆ ತಕ್ಷಣವೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಶ್ವೇತಪತ್ರ ಹೊರಡಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಇಲಾಖೆಯಲ್ಲೂ ಶೇ.25ರಷ್ಟು ಪ್ರಗತಿಯಾಗಿಲ್ಲ. ಸರ್ಕಾರ ರಚನೆಯಾಗಿ 6 ತಿಂಗಳಾದರೂ ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ಜನರಿಗೆ ತಿಳಿಯುತ್ತಿಲ್ಲ. ಎಷ್ಟು ತೆರಿಗೆ ಸಂಗ್ರಹವಾಗಿದೆ ಎಂಬ ಮಾಹಿತಿಯೂ ಇಲ್ಲ. ತಕ್ಷಣವೇ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಕುಮಾರಸ್ವಾಮಿಗೆ ತಮ್ಮ ಸಂಪುಟ ಸಹೋದ್ಯೋಗಿಗಳು ಏನು ಮಾಡುತ್ತಿದ್ದಾರೆ.ಇಲಾಖೆಯಲ್ಲಿ ಎಷ್ಟು ಪ್ರಗತಿಯಾಗಿದೆ.ಯಾವ ಸಚಿವರು ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.ಜಿಲ್ಲಾ ಪ್ರವಾಸ ಕೈಗೊಂಡಿದ್ದಾರಾ?ಬರ ನಿರ್ವಹಣೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ರೈತರ ಆತ್ಮಹತ್ಯೆ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಇದೆಯೇ?ಎಂದು ಪ್ರಶ್ನಿಸಿದರು.
ಬಜೆಟ್ ಮಂಡನೆಯಾಗಿ ಐದು ತಿಂಗಳಾಗಿದೆ. ಈಗಲೂ ಸುಮಾರು 30ಕ್ಕೂ ಹೆಚ್ಚು ಇಲಾಖೆಗಳಲ್ಲಿ ಶೇ.25ರಷ್ಟೂ ಪ್ರಗತಿ ದಾಟಿಲ್ಲ. ತೆರಿಗೆ ಸಂಗ್ರಹಣೆಗೆ ನಾವು ಅಧಿಕಾರಿಗಳಿಗೆ ಗುರಿ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಎಷ್ಟು ತೆರಿಗೆ ಸಂಗ್ರಹವಾಗಿದೆ ಎಂಬುದನ್ನು ಜನತೆಯ ಮುಂದಿಡಲಿ ಎಂದು ಒತ್ತಾಯಿಸಿದರು.
ಬೆಳಗಾವಿ ಅಧಿವೇಶನದಲ್ಲಿ ನಾನು ಸರ್ಕಾರದ ಸಾಧನೆಗಳನ್ನು ಯಡಿಯೂರಪ್ಪನವರ ಮುಂದೆ ದಾಖಲೆಗಳ ಸಮೇತ ಇಡುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.ಯಾವ ದಾಖಲೆಗಳನ್ನು ನೀವು ಇಡುತ್ತೀರಿ ಎಂಬುದನ್ನು ಮೊದಲು ಹೇಳಿ ಎಂದು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.