ರಾಜಕಾರಣದಲ್ಲಿ ಯಾವುದು ಅಸಾಧ್ಯವಲ್ಲ ಅರ್.ಆಶೋಕ್

ಬೆಂಗಳೂರು,ನ.29-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸೇರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜಕಾರಣದಲ್ಲಿ ಯಾವುದು ಅಸಾಧ್ಯವಲ್ಲ ಎನ್ನುವ ಮೂಲಕ ಬಿಜೆಪಿ ಮುಖಂಡ ಆರ್.ಅಶೋಕ್ ಮತ್ತೆ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.ಅಂಥವರೇ ಇಂದು ಪರಸ್ಪರ ಕೈ ಜೋಡಿಸುತ್ತಾರೆಂದರೆ ರಾಜಕಾರಣದಲ್ಲಿ ಅಸಾಧ್ಯ ಎಂಬುದು ಇಲ್ಲವೇ ಇಲ್ಲ ಎಂದು ಖಡಾತುಂಡವಾಗಿ ಹೇಳಿದರು.

ದೇವೇಗೌಡರು, ಸಿದ್ದರಾಮಯ್ಯನವರು ಪುನಃ ಒಂದಾಗುತ್ತಾರೆ ಎಂಬುದು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ. ಹಾವು ಮುಂಗೂಸಿಯಂತಿದ್ದವರೇ ಒಂದಾಗಿರುವಾಗ ಇನ್ನು ನಮ್ಮ ಪಕ್ಷಕ್ಕೆ ಅನ್ಯ ಪಕ್ಷಗಳಿಂದ ಬರುವುದಿಲ್ಲ ಎಂಬುದಕ್ಕೆ ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬುದು ಜನರಿಗೆ ಗೊಂದಲವಾಗಿದೆ. ಇಲ್ಲಿ ಮುಖ್ಯಮಂತ್ರಿ ಯಾರು ಎಂಬುದೇ ತಿಳಿಯುತ್ತಿಲ್ಲ. ಸಚಿವರು ಎಲ್ಲಿ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ದೇವರಿಗೆ ಗೊತ್ತು ಎಂದು ವ್ಯಂಗ್ಯವಾಡಿದರು.

38 ಶಾಸಕರನ್ನು ಇಟ್ಟುಕೊಂಡವರು ಇಂದು ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.2ನೇ ಸ್ಥಾನದಲ್ಲಿರುವವರು ದೈನೇಸಿ ಸ್ಥಿತಿಗೆ ಬಂದಿದ್ದಾರೆ.ಅತಿ ಹೆಚ್ಚು ಸ್ಥಾನ ಗೆದ್ದಿರುವವರು ವಿರೋಧ ಪಕ್ಷದಲ್ಲಿದ್ದಾರೆ.ಇದು ಪ್ರಜಾಪ್ರಭತ್ವ ವ್ಯವಸ್ಥೆಯ ದುರಂತವೋ, ಅಣಕವೋ ಗೊತ್ತಿಲ್ಲ ಎಂದು ಕುಹಕವಾಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆಯವರಿಗೆ ಹತಾಶೆ ಕಾಡುತ್ತಿದೆ. ಹೀಗಾಗಿ ಅವರು ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತಾರೆ.ರೈತರು, ಮಹಿಳೆಯರನ್ನು ಅಪಮಾನಕ್ಕೀಡು ಮಾಡಿ ಈಗ ಮಾಧ್ಯಮದವರ ಮೇಲೂ ಮುಗಿಬಿದ್ದಿದ್ದಾರೆ ಎಂದರು.

ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ನಾನು ಪತ್ರಿಕಾಗೋಷ್ಠಿಯನ್ನೇ ನಡೆಸುವುದಿಲ್ಲ, ಬೇಕಾದರೆ ಬರೆದುಕೊಳ್ಳಿ ಎಂದು ಉಡಾಫೆಯ ಮಾತನ್ನಾಡುತ್ತಿದ್ದಾರೆ.ಅಧಿಕಾರ ನಡೆಸಲು ಕುಮಾರಸ್ವಾಮಿಯವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಶೋಕ್ ಟೀಕಿಸಿದರು.

ನೀವು ಮುಖ್ಯಮಂತ್ರಿಯಾದವರು.ಉನ್ನತ ಸ್ಥಾನದಲ್ಲಿದ್ದೀರಿ.ನಿಮಗೆ ಶಾಂತಿ, ಸಂಯಮ, ಸಹನೆ ಇರಬೇಕು.ಜನರು ಕಷ್ಟ ಎಂದು ಬಂದಾಗ ಅದನ್ನು ಆಲಿಸಿ ಪರಿಹರಿಸುವುದು ನಿಮ್ಮ ಜವಾಬ್ದಾರಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ