ನವದೆಹಲಿ: ನೋಟು ಅಮಾನ್ಯೀಕರಣದ ಬಳಿಕ ಪರಿಚಯಿಸಲಾಗಿದ್ದ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ನೋಟುಗಳು ಬಹುಬೇಗನೇ ‘ನಿಷ್ಪ್ರಯೋಜಕ’ವಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
2000, 500, 200 ಹಾಗೂ 10 ರೂ ಮುಖ್ಯಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಬಳಸಲಾಗುತ್ತಿರುವ ಪೇಪರ್ನ ಗುಣಮಟ್ಟ ತೀರಾ ಕಳಪೆ ಗುಣಮಟ್ಟದ್ದಾಗಿದೆ ಇದರಿಂದಾಗಿ ಹೊಸ ನೋಟುಗಳು ಬಹುಬೇಗನೇ ಅಂದರೆ ಇನ್ನೆರಡು ವರ್ಷಗಳಲ್ಲಿ ನಿಷ್ಪ್ರಯೋಜಕವಾಗುತ್ತವೆ ಎಂದು ಹಿಂದಿ ಪತ್ರಿಕೆ ಅಮರ್ ಉಜಾಲ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನು ಎಟಿಎಂನಲ್ಲಿರುವ ಸೆನ್ಸಾರ್ಗಳು ಕಳಪೆ ಗುಣಮಟ್ಟದ ನೋಟುಗಳನ್ನು ಪತ್ತೆ ಹಚ್ಚುವುದಿಲ್ಲವಾದ್ದರಿಂದ, ಹಾಳಾದ ನೋಟುಗಳನ್ನು ಎಟಿಎಂಗಳಲ್ಲಿಯೂ ಬಳಸಲು ಸಾಧ್ಯವಾಗುತ್ತಿಲ್ಲ. ಈ ನೋಟುಗಳು ಬಳಸಲು ಸಾಧ್ಯವಾಗದಂತಾಗಿವೆ ಎನ್ನಲಾಗಿದೆ.
ಈ ನಡುವೆ ಬ್ಯಾಂಕ್ಗಳು ಇಂತಹ ನೋಟುಗಳನ್ನು ವರ್ಗೀಕರಿಸಿ ವಿತರಿಸಲಾಗದ ಪಟ್ಟಿಗೆ ಸೇರಿಸುವ ಕೆಲಸವನ್ನು ಪ್ರಾರಂಭಿಸಿವೆ. ನೋಟುಗಳನ್ನು ಮುದ್ರಿಸಲು ಬಳಸುತ್ತಿರುವ ಪೇಪರ್ ಗುಣಮಟ್ಟ ಸರಿಯಿಲ್ಲ ಎನ್ನುವುದನ್ನು ಅಲ್ಲಗಳೆದಿರುವ ಸರ್ಕಾರ, ‘ನೋಟು ನಕಲುಗೊಳ್ಳುವುದನ್ನು ತಪ್ಪಿಸಲು ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಿದ್ದೇವೆ’ ಎಂದು ಸಮರ್ಥಿಸಿಕೊಂಡಿದೆ.
ನಮ್ಮ ಜನರು ನೋಟುಗಳನ್ನು ಮಡಚಿ ಅಥವಾ ಸೀರೆಯಲ್ಲಿ ಗಂಟು ಹಾಕಿಕೊಂಡು ಅಥವಾ ಪಂಚೆಯಲ್ಲಿ… ಹೀಗೆ ಹೇಗೆಂದರೆ ಹಾಗೆ ಇಟ್ಟುಕೊಳ್ಳುವುದರಿಂದ ಹೊಸ ಮುಖಬೆಲೆಯ ನೋಟುಗಳು ಬಹುಬೇಗನೇ ಹಾಳಾಗುತ್ತಿವೆ’ ಎಂದು ಹಣಕಾಸು ಸಚಿವಾಲಯದ ಬ್ಯಾಂಕಿಂಗ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಮರ್ ಉಜಾಲ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ಚಲಾವಣೆಗೆ ಸಾಧ್ಯವಾಗದ ನೋಟುಗಳನ್ನು ಬ್ಯಾಂಕ್ಗಳು ಬಳಸಲು ಸಾಧ್ಯವಾಗದ ಪಟ್ಟಿಗೆ ಸೇರಿಸುತ್ತವೆ. ಕೊಳಕಾದ, ಮಣ್ಣಾದ ಅಥವಾ ನೋಟಿನ ಮೇಲೆ ಹಸ್ತಾಕ್ಷರವಿದ್ದ ನೋಟುಗಳನ್ನು ಈ ವರ್ಗಕ್ಕೆ ಸೇರಿಸಲಾಗುತ್ತದೆ. ನಂತರ ಅವುಗಳನ್ನು ಆರ್ಬಿಐಗೆ ವಾಪಸ್ ಕಳುಹಿಸಲಾಗುತ್ತದೆ. ಹೊಸ ನೋಟುಗಳನ್ನು ‘ಬಳಸಲು ಆಗದ’ ವರ್ಗಕ್ಕೆ ಸೇರಿಸುವುದನ್ನು ಆರ್ಬಿಐ ಈ ಹಿಂದೆ ನಿಷೇಧಿಸಿತ್ತು. ಆದರೆ, ವಾಣಿಜ್ಯ ಬ್ಯಾಂಕ್ಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದರಿಂದ 2018ರ ಜುಲೈನಲ್ಲಿ ಆರ್ಬಿಐ ನಿಷೇಧವನ್ನು ತೆರವುಗೊಳಿಸಿತು.
New notes issued after demonetisation become ‘unusable’ in just 2 years