ಬೆಂಗಳೂರು, ನ.29-ಯಾರೊಬ್ಬರೂ ಆಸೆ, ಆಮಿಷಗಳಿಗೆ ಬಲಿಯಾಗದೆ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ.ದೋಸ್ತಿ ಸರ್ಕಾರದ ಆಯುಸ್ಸು ಎಷ್ಟು ದಿನ ಇರುತ್ತದೆ ಎಂಬುದನ್ನು ನೀವೆ ಕಾದು ನೋಡಿ ಎಂದು ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ , ಅಧಿಕಾರದ ಆಸೆಗಾಗಿ ಯಾವುದೇ ಶಾಸಕರು ಪಕ್ಷ ಬಿಡುವಂತಹ ಕೆಟ್ಟ ತೀರ್ಮಾನ ಕೈಗೊಳ್ಳಬೇಡಿ. ಬಿಜೆಪಿಯಲ್ಲಿದ್ದರೆ ನಿಮಗೆ ಭವಿಷ್ಯ ಇದ್ದೇ ಇರುತ್ತದೆ. ನಮ್ಮ ಪಕ್ಷವನ್ನು ಬಿಟ್ಟು ಹೋದವರ ಗತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ನಾಯಕರಲ್ಲಿ ಒಮ್ಮತ, ಒಗ್ಗಟ್ಟು ಕಂಡುಬರುತ್ತಿಲ್ಲ. ಅಲ್ಲಿ ಸಾಕಷ್ಟು ಗುಂಪುಗಾರಿಕೆ ನಡೆಯುತ್ತದೆ.ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮ ಬಂಡವಾಳ ಬಯಲಾಗಬಹುದೆಂಬ ಕಾರಣಕ್ಕಾಗಿ ನಮ್ಮನ್ನು ದೂರವಿಡಲು ಮೈತ್ರಿ ಮಾಡಿಕೊಂಡಿದ್ದಾರೆ.ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಸ್ವಲ್ಪ ದಿನ ಸಹನೆಯಿಂದ ಇರಬೇಕೆಂದು ಬಿಎಸ್ವೈ ಹೇಳಿರುವುದಾಗಿ ತಿಳಿದುಬಂದಿದೆ.
ಕೆಲವು ಶಾಸಕರು ಆಡಳಿತರೂಢ ಪ್ರಭಾವಿಸಚಿವರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಖುದ್ದು ಯಡಿಯೂರಪ್ಪ ಶಾಸಕರಿಗೆ ಹಿತೋಪದೇಶ ಮಾಡಿದ್ದಾರೆ.
ನಿಮ್ಮ ಮೇಲೆ ನಂಬಿಕೆಯಿಟ್ಟು ಚುನಾವಣೆಯಲ್ಲಿ ಟಿಕೆಟ್ ನೀಡಿದ್ದೆವು. ಹಲವರ ವಿರೋಧವಿದ್ದರೂ ಎಲ್ಲವನ್ನು ಎದುರಿಸಿಯೇ ನಿಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸಿಕೊಂಡು ಬಂದಿದ್ದೇವೆ. ನಿಮಗೆ ಪಕ್ಷ ಬಿಡುವಂತಹ ಪರಿಸ್ಥಿತಿ ಏನಾಗಿದೆ? ಎಲ್ಲರಿಗೂ ಮುಕ್ತ ಸ್ವತಂತ್ರ ನೀಡಲಾಗಿದೆ. ಸಚಿವ ಸ್ಥಾನ, ನಿಗಮಮಂಡಳಿ, ಆರ್ಥಿಕ ಸಹಾಯಕ್ಕಾಗಿ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಡಿ. ಸರ್ಕಾರದ ಅಸ್ತಿತ್ವ ಕೆಲವೇ ತಿಂಗಳು ಎಂಬುದು ನಿಮಗೆ ಅರ್ಥವಾಗಲಿದೆ ಎನ್ನುವ ಮೂಲಕ ಶಾಸಕರನ್ನು ಮನವೊಲಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ನನಗೆ ಯಾವುದೇ ಶಾಸಕರ ಮೇಲೂ ಅನುಮಾನವಿಲ್ಲ. ನೀವು ಪಕ್ಷ ಬಿಟ್ಟು ಹೋಗುತ್ತೀರ ಎಂಬ ದುರಾಲೋಚನೆಯೂ ಇಲ್ಲ. ಆದರೆ ಮಾಧ್ಯಮಗಳಲ್ಲಿ ಬರುತ್ತಿರುವ ಊಹಾಪೆÇೀಹಗಳಿಗೆ ನೀವು ತಲೆಕೆಡಿಸಿಕೊಳ್ಳದೆ ಪಕ್ಷದಲ್ಲಿ ಮುಂದುವರೆಯಬೇಕು. ಎಲ್ಲರಿಗೂ ಉತ್ತಮವಾದ ಭವಿಷ್ಯವಿದೆ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಬಹುತೇಕ ಎಲ್ಲ ಶಾಸಕರು ಎಂಥದೇ ಸಂದರ್ಭದಲ್ಲೂ ಪಕ್ಷ ಬಿಟ್ಟು ಹೋಗುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.