ಬೆಂಗಳೂರು,ನ.28- ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಳಂಬ ವಿಚಾರದಲ್ಲಿ ಸರ್ಕಾರ ಶೀಘ್ರವೇ ಸೂಕ್ತ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ನಟ ಅನಿರುದ್ಧ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷ್ಣು ಸ್ಮಾರಕ ನಿರ್ಮಾಣ ಸಂಬಂಧ ಈಗಾಗಲೇ ಐದು ಜನ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಆದರೆ ನಮಗೆ ನ್ಯಾಯ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕಿದೆ ಎಂದರು.
ಡಿ.30ರವರೆಗೂ ಗಡುವು ನೀಡುತ್ತೇವೆ. ಅಲ್ಲಿಯವರೆಗೂ ಸರ್ಕಾರ ನಿರ್ಧಾರ ಕೈಗೊಳ್ಳದ ಪಕ್ಷದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಸ್ಮಾರಕ ನಿರ್ಮಾಣದಿಂದ ಸರ್ಕಾರಕ್ಕೆ ಹೆಸರು.ಆದರೆ ವಿವಾದಿತ ಸ್ಥಳವನ್ನು ನೀಡಿದ್ದಾರೆ. ಇದರಿಂದ ಸ್ಮಾರಕ ನಿರ್ಮಾಣಕ್ಕೆ ತೊಂದರೆ ಎದುರಾಗಿದೆ.ಈ ತೊಂದರೆ ನಿವಾರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆಯೂ ಮನವಿ ಮಾಡಿದ್ದೆವು.ಆದರೆ ಯಾವುದೇ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಇದರಿಂದ ಇತ್ತ ಸ್ಮಾರಕವೂ ನಿರ್ಮಾಣವಾಗದೆ ಸಮಸ್ಯೆಯಾಗೇ ಉಳಿದಿದೆ ಎಂದರು.
ಡಿ. 10ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಎಲ್ಲಾ ಶಾಸಕರು ಹಾಜರಾಗಬೇಕು: ಬೆಂಗಳೂರು,ನ.28-ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಎಲ್ಲ ಶಾಸಕರು ಹಾಜರಾಗಬೇಕೆಂದು ಅಪೇಕ್ಷೆ ಪಡುತ್ತೇವೆ. ಆದರೂ ಕಡ್ಡಾಯ ಹಾಜರಾಗುವಂತೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ತಾವು ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಮಾಲೋಚನೆ ನಡೆಸಿದ್ದೇವೆ ಎಂದರು.
ಕಳೆದ ಬಾರಿ ಅಧಿವೇಶನದ ಸಂದರ್ಭದಲ್ಲಿ ಊಟದ ವಿಚಾರದಲ್ಲಿ ಎದುರಾಗಿದ್ದ ಸಮಸ್ಯೆ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚರ ವಹಿಸಲಾಗಿದೆ.ಉತ್ತರ ಕರ್ನಾಟಕ, ಕರಾವಳಿ, ಮೈಸೂರು ಭಾಗದ ಆಹಾರ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದ್ದು, ಅಧಿವೇಶನದ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆಗಳಿಗೆ ಅಗತ್ಯ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.
ಅಧಿವೇಶನದ ಸಂಬಂಧ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಕೆಲಸಗಳ ಹಂಚಿಕೆ ಮಾಡಲಾಗಿದೆ.ರಾಜ್ಯ ಮತ್ತು ತಮ್ಮ ಸ್ವಕ್ಷೇತ್ರಗಳ ಹಿತದೃಷ್ಟಿಯಿಂದ ಎಲ್ಲ ಶಾಸಕರು ಅಧಿವೇಶನದಲ್ಲಿ ಪಾಲ್ಗೊಂಡು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕಾಗಿದೆ. ಅಲ್ಲದೆ ಶಾಸಕರು ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆ ಕೊಡಬೇಕು ಎಂದರು.
ಮೇಕೆದಾಟು ಯೋಜನೆಗೆ ಕೇಂದ್ರ ಒಪ್ಪಿಗೆ ಸೂಚಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆಯಿಂದ ನಗರ, ಗ್ರಾಮಾಂತರ, ಕೋಲಾರ ಭಾಗಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿಂದೆ ತಮಿಳುನಾಡು ಸಹ ಒಪ್ಪಂದಕ್ಕೆ ಸಹಿ ಹಾಕಿತ್ತು ಎಂದ ಅವರು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕ್ರಿಯಾಶೀಲರಾಗಿದ್ದು ವಿಸ್ತ್ರೃತ ಯೋಜನಾ ವರದಿಯನ್ನು ಶೀಘ್ರವೇ ಕೇಂದ್ರಕ್ಕೆ ಸಲ್ಲಿಸಬೇಕು ಎಂದರು.
ಡಿ.10ರಂದು ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಕಲಾಪ ಮುಂದೂಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.