ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಸುಳಿವು

ಬೆಂಗಳೂರು, ನ.28- ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಸುಳಿವು ಸಿಕ್ಕಿದೆ.ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಸುಮಾರು 20 ನಿಮಿಷಗಳ ಕಾಲ ರಹಸ್ಯ ಮಾತುಕತೆ ನಡೆಸಿದ್ದು, ಬಿಜೆಪಿಯವರು ಡಿ.ಕೆ.ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂಬರ್ಥದಲ್ಲಿ ಮಾತನಾಡಿ ಕುತೂಹಲ ಹುಟ್ಟು ಹಾಕಿದ್ದಾರೆ.

ಬಿಜೆಪಿಯ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಶಾಸಕ ಹರತಾಳ ಹಾಲಪ್ಪ, ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ, ಅರಣ್ಯ ಸಚಿವ ಆರ್.ಶಂಕರ್ ಅವರು ಇಂದು ಕ್ರೆಜೆಂಟ್ ರಸ್ತೆಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಸರ್ಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ.
ಅಧಿಕಾರಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸುಮಾರು 8 ನೀರಾವರಿ ಯೋಜನೆಗಳ ಬಗ್ಗೆ ಯಡಿಯೂರಪ್ಪ ಪ್ರಸ್ತಾಪಿಸಿದ್ದು, ಅವುಗಳಿಗೆ ಚಾಲನೆ ನೀಡುವಂತೆ ಮನವಿ ಮಾಡಿದ್ದಾರೆ.

ಇದಾದ ಬಳಿಕ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರು ಆ್ಯಂಟಿ ಚೇಂಬರ್‍ನಲ್ಲಿ ಸುಮಾರು 20 ನಿಮಿಷಗಳ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ.ಸಭೆಯ ನಂತರ ಇಬ್ಬರೂ ನಾಯಕರು ಜಂಟಿಯಾಗಿ ಮಾಧ್ಯಮಗಳ ಮುಂದೆ ಹಾಜರಾಗಿ ಅಭಿವೃದ್ಧಿ ವಿಷಯದ ಬಗ್ಗೆ ಅಷ್ಟೇ ಚರ್ಚೆ ಮಾಡಿದೆವು ಎಂದು ಹೇಳಿಕೆ ನೀಡಿದರು.

ಅಭಿವೃದ್ಧಿಯ ಹೊರತಾಗಿ ರಾಜಕೀಯವಾಗಿ ಚರ್ಚೆ ಮಾಡಿಲ್ಲ ಎಂದು ಇಬ್ಬರೂ ಹೇಳಿದರಾದರೂ ಕೊನೆಯಲ್ಲಿ ಹೊರಡುವಾಗ ಯಡಿಯೂರಪ್ಪ, ರಾಜಕೀಯ ಚರ್ಚೆಗಳನ್ನು ಮಾಧ್ಯಮದ ಎದುರು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಕುತೂಹಲ ಹುಟ್ಟು ಹಾಕಿದರು.
ಮೂಲಗಳ ಪ್ರಕಾರ ಬಿಜೆಪಿ ನಾಯಕರು ಮತ್ತು ಡಿ.ಕೆ.ಶಿವಕುಮಾರ್ ಅವರ ಭೇಟಿ ರಾಜಕೀಯವಾಗಿ ಬದಲಾವಣೆಗೆ ವೇದಿಕೆ ಸೃಷ್ಟಿಸುವ ಚರ್ಚೆ ಎಂದು ವಿಶ್ಲೇಷಿಸಲಾಗಿದೆ.

ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಸಾಮಥ್ರ್ಯದ ಬಗ್ಗೆ ಆಡಿ ಹೊಗಳಿದ್ದಾರೆ.ತಾವು ಹೈಕಮಾಂಡ್ ಜತೆ ಚರ್ಚೆ ಮಾಡಿದ ಬಳಿಕವೇ ನಿಮ್ಮನ್ನು ಭೇಟಿ ಮಾಡುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ.ನಿಮ್ಮ ನಿರ್ಧಾರದ ಮೇಲೆ ನಿಮ್ಮ ಹಾಗೂ ನಮ್ಮ ಭವಿಷ್ಯ ಅಡಗಿದೆ ಎಂದು ಬಿಜೆಪಿ ನಾಯಕರು ಹೇಳಿರುವುದಾಗಿ ಮಾಹಿತಿ ಲಭಿಸಿದೆ.

ಯಡಿಯೂರಪ್ಪ ಅಧಿಕೃತವಾಗಿ ವಿರೋಧ ಪಕ್ಷದ ನಾಯಕರಾಗಿದ್ದು, ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಒಂದು ಪತ್ರ ಬರೆದಿದ್ದರೂ ಸಾಕಿತ್ತು.ಅದನ್ನು ಬಿಟ್ಟು ನೇರವಾಗಿ ತಾವೇ ಸಚಿವರ ಕಚೇರಿಗೆ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ನಮ್ಮ ಮನೆಯಲ್ಲಿ ಅಥವಾ ಬೇರೆ ಕಡೆ ಚರ್ಚೆ ನಡೆದರೆ ಅಧಿಕಾರಿಗಳನ್ನು ಕರೆಸಿಕೊಂಡು ಮಾತನಾಡುವುದು ಕಷ್ಟ. ಹಾಗಾಗಿ ನಾನೇ ಬಂದೆ ಎಂದು ಸಮರ್ಥಿಸಿಕೊಂಡರು. ಇದಕ್ಕೆ ದನಿ ಗೂಡಿಸಿದ ಡಿ.ಕೆ.ಶಿವಕುಮಾರ್, ರಾಜಕೀಯ ಹೊರತಾಗಿಯೂ ವೈಯಕ್ತಿಕವಾಗಿ ನಾವಿಬ್ಬರೂ ಉತ್ತಮ ಸ್ನೇಹಿತರು ಎಂದು ಯಡಿಯೂರಪ್ಪ ಅವರ ಜತೆ ಕೈ ಮಿಲಾಯಿಸಿದರು.

ರಹಸ್ಯ ಮಾತುಕತೆಯಲ್ಲಿ ಯಡಿಯೂರಪ್ಪ ಹಲವಾರು ರಾಜಕೀಯ ಸೂತ್ರಗಳನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ನಾಯಕರಾದ ಪ್ರಭಾರಕ್ ಕೋರೆ ಅವರು ಇತ್ತೀಚೆಗೆ ನಡೆದ ಕೆಎಲ್‍ಇ ಸುವರ್ಣ ಮಹೋತ್ಸವದಲ್ಲಿ ಡಿ.ಕೆ.ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆ.ಆದಷ್ಟು ಶೀಘ್ರ ಆ ಕಾಲ ಬರಲಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು.ಆ ಕುರಿತ ಪತ್ರಿಕಾ ವರದಿಯ ತುಣುಕುಗಳನ್ನು ಇಂದು ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿಸಿ ಮಾತುಕತೆ ನಡೆಸಲಾಗಿದೆ.

ರಾಜಕೀಯವಾಗಿ ಈ ಇಬ್ಬರು ನಾಯಕರ ಭೇಟಿ ಸಾಕಷ್ಟು ಕುತೂಹಲಗಳನ್ನು ಮೂಡಿಸಿವೆ. ಆದರೆ, ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಾಗಿ ಡಿ.ಕೆ.ಶಿವಕುಮಾರ್ ಅವರು ನಿನ್ನೆಯೇ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಹೈದರಾಬಾದ್‍ಗೆ ತೆರಳಬೇಕಿದ್ದ ಡಿ.ಕೆ.ಶಿವಕುಮಾರ್ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟು ಇಂದು ಯಡಿಯೂರಪ್ಪ ಅವರ ಭೇಟಿಗೆ ಸಮಯ ಮೀಸಲಿಡುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಸುದೀರ್ಘ ಕಾಲದ ನಂತರ ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಜೆಡಿಎಸ್‍ಗೆ ಟಾಂಗ್ ನೀಡುವ ಪ್ರಯತ್ನ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ