ಹಾಸನ: “ರಾಜಕೀಯ ಗೊಂದಲ ಮಾಡಿ, ನೀವು ನಿಮ್ಮ ದರ್ಪ ದವಲತ್ತು ತೋರಿಸಬೇಡಿ,” ಎಂದು ಸಿಎಂ ಕುಮಾರಸ್ವಾಮಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ವಿರುದ್ಧ ಕಿಡಿಕಾರಿದ್ದಾರೆ.
“ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಿ,” ಎಂದು ಅನಿರುದ್ಧ್ ನಿಷ್ಠುರವಾಗಿ ಮಾತನಾಡಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಇಂದು ಅನಿರುದ್ಧ್ ವಿರುದ್ಧ ಗರಂ ಆಗಿದ್ದಾರೆ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಬಳಕೆ ಮಾಡುವ ಪದಗಳ ಗಾಂಭೀರ್ಯತೆ ಅರಿತುಕೊಳ್ಳಬೇಕು ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿಷ್ಣುವರ್ಧನ್ ನಿಧನರಾದಾಗ ನಾನು ಅಧಿಕಾರದಲ್ಲಿ ಇರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಕ್ಕೆ ಅವರಿಗೆ ಕೊಡುಗೆ ನೀಡಿದ್ದೇವೆ. ವಿಷ್ಣುವರ್ಧನ್ರವರ ಪಾರ್ಥಿವ ಶರೀರ ಅಂತ್ಯಕಾರ್ಯ ಎಲ್ಲಿ ಮಾಡುತ್ತೀರಿ ಎಂದು ಭಾರತಿ ವಿಷ್ಣುವರ್ಧನ್ ಅವರನ್ನು ಕೇಳಿದ್ದೆ. ವಿಷ್ಣುವರ್ಧನ್ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಿ ಎಂದು ನಾನೇ ಹೇಳಿದ್ದೆ. ನಾನೇ ಅಂದಿನ ಸಿಎಂ ಯಡಿಯೂರಪ್ಪರ ಜೊತೆ ಮಾತನಾಡಿ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೆ,” ಎಂದು ತಿಳಿಸಿದರು.
ಈಗ ವಿಷ್ಣುವರ್ಧನ್ರ ಅಳಿಯ ಅನಿರುದ್ಧ್ ಅವರು ಸರ್ಕಾರಕ್ಕೆ ಮಾನಮರ್ಯಾದೆ ಇದೆಯಾ ಅಂತಾ ಕೇಳುತ್ತಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೆ ಆಗಲ್ಲ, ಶಾಂತಿಪ್ರಿಯ ಸಂಸ್ಕೃತಿ ನಮ್ಮದು. ರಾಜಕೀಯ ಗೊಂದಲ ಮಾಡಿ ನೀವು ನಿಮ್ಮ ದರ್ಪ, ದೌಲತ್ತು ತೋರಿಸಬೇಡಿ ಎಂದು ಸಿಎಂ ಕಿಡಿಕಾರಿದ್ದಾರೆ. ನಾವು ಕೊಟ್ಟಿರುವ ಗೌರವಕ್ಕೆ ನೀವು ಕೃತಜ್ಞತೆ ಸಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.