ಬೆಂಗಳೂರು,ನ.28-ಸಾರ್ವಜನಿಕರಲ್ಲಿ ರೋಗ ನಿವಾರಿಸುವ ಔಷಧಿಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕ ಎಂದು ಸರ್ಕಾರಿ ಕಾಲೇಜ್ ಆಫ್ ಫಾರ್ಮಸಿಯ ಪ್ರಾಧ್ಯಾಪಕ ಡಾ.ಕೆ.ಪಿ.ಚನ್ನಬಸವರಾಜ್ ತಿಳಿಸಿದರು.
ಯಲಹಂಕದ ಆದಿತ್ಯ ಕಾಲೇಜಿನ ಔಷಧಾಲಯ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಔಷಧ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರಲ್ಲಿ ಔಷಧಿಗಳ ಬಗ್ಗೆ ಜಾಗೃತಿ ಮೂಡಿಸಿದರೆ ಹಲವು ರೋಗಗಳನ್ನು ಆರಂಭಿಕ ಹಂತದಲ್ಲೇ ತಡೆಗಟ್ಟಲು ಸಾಧ್ಯ ಎಂದ ಅವರು, ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಾಲಯದ ಪಾತ್ರ ಅತಿಮುಖ್ಯ. ಈ ನಿಟ್ಟಿನಲ್ಲಿ ಮುಖ್ಯ ಔಷಧಾಲಯ (ಫಾರ್ಮಸಿಸ್ಟ್) ಶಿಕ್ಷಣ ಪಡೆಯುವ ಮೂಲಕ ಹೆಚ್ಚಿನ ಉದ್ಯೋವಕಾಶ ಪಡೆಯಲು ಸಾಧ್ಯವಿದೆ ಎಂದರು.
ಕಾಲೇಜಿನ ಅಧ್ಯಕ್ಷ ಡಾ.ಬಿ.ಎ.ವಿಶ್ವನಾಥ್ ಮಾತನಾಡಿ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರ ಪಾತ್ರ ಹೇಗೆ ಪ್ರಮುಖವಾಗುತ್ತದೆಯೋ ಅದೇ ರೀತಿ ಔಷಧಿಗಳು ಮುಖ್ಯವಾಗುತ್ತದೆ. ಇದನ್ನು ಪೂರೈಸುವ ಫಾರ್ಮಸಿಸ್ಟ್ಗಳ ಸೇವೆ ಅನನ್ಯ ಎಂದು ಅಭಿಪ್ರಾಯಪಟ್ಟರು.
ಆದಿತ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ಇಲ್ಲಿ ವಿದ್ಯಾಭ್ಯಾಸ ಮಾಡಿದವರು ಪ್ರಮುಖ ಔಷಧಿ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೈಕುಂಜೆ ಸಲಹಾ ಕಂಪನಿಯ ಸಂಸ್ಥಾಪಕ ಉಮೇಶ್ ಬೈಕುಂಜೆ ಔಷಧಗಳ ಮಹತ್ವ ಮತ್ತು ಅರಿವು ಮೂಡಿಸುವ ಅಗತ್ಯತೆಯನ್ನುಪ್ರತಿಪಾದಿಸಿದರು.