ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ, ಹವಾಮಾನ ತಜ್ಞರ ಹೇಳಿಕೆ

LOS OLIVOS, CA - AUGUST 18: The fog begins to burn off in a vineyard at Zaca Mesa Winery on August 18, 2015, near Los Olivos, California. Because of their close proximity to Southern California and Los Angeles population centers, the coastal regions north of Santa Barbara have become a popular weekend getaway destination for millions of tourists. (Photo by George Rose/Getty Images)

ಬೆಂಗಳೂರು, ನ.28- ರಾಜ್ಯದಲ್ಲಿ ಮೈಕೊರೆಯುವ ಮಾಗಿ ಚಳಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕನಿಷ್ಠ ತಾಪಮಾನ ರಾಜ್ಯದಲ್ಲಿ ವಾಡಿಕೆಗಿಂತ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‍ನಷ್ಟು ಈ ಬಾರಿ ಕಡಿಮೆಯಾಗಿದೆ. ಇದರಿಂದ ಚಳಿಯ ತೀವ್ರತೆ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಹಗಲಿನಲ್ಲಿ ಗರಿಷ್ಠ ತಾಪಮಾನ ಹೆಚ್ವಾಗಿದ್ದು, ರಾತ್ರಿ ವೇಳೆ ಕನಿಷ್ಠ ತಾಪಮಾನ ಅತ್ಯಂತ ಕಡಿಮೆ ಇರುತ್ತದೆ. ಇದರಿಂದ ಚಳಿ ಹೆಚ್ಚಾಗಿ ಕಂಡು ಬರುತ್ತಿದೆ.ನವೆಂಬರ್ ಹಾಗೂ ಡಿಸೆಂಬರ್‍ನಲ್ಲಿ ಚಳಿ ಸಾಮಾನ್ಯವಾದರೂ ಈ ಬಾರಿ ಹೆಚ್ಚು ಚಳಿ ಕಂಡು ಬರುತ್ತಿದೆ.
ರಾಜ್ಯದ ಕರಾವಳಿ ಭಾಗ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲೂ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆಯಾಗಿದೆ. ಸರಾಸರಿ 10ರಿಂದ 12 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನವಿದ್ದರೆ, ಗರಿಷ್ಠ ತಾಪಮಾನ 30ಡಿಗ್ರಿ ಸೆಲ್ಸಿಯಸ್‍ನ ಆಸುಪಾಸಿನಲ್ಲಿದೆ.

ಗಜ ಚಂಡಮಾರುತ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಅಷ್ಟಾಗಿ ಕಂಡು ಬರಲಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣಕ್ಕಿಂತಲೂ ಕಡಿಮೆ ಮಳೆಯಾಯಿತು.

ಅಲ್ಲದೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆಯಾಗಿದೆ.ಮಳೆ ಪ್ರಮಾಣ ಕಡಿಮೆಯಾದ್ದರಿಂದ ಚಳಿ ಪ್ರಮಾಣ ಹೆಚ್ಚಾಗುತ್ತಿದೆ.ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದ 14 ಹೋಬಳಿಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.31ಹೋಬಳಿಗಳಲ್ಲಿ ಮಾತ್ರ ವಾಡಿಕೆ ಪ್ರಮಾಣದ ಮಳೆಯಾಗಿದೆ.

ಅಕ್ಟೋಬರ್, ನವೆಂಬರ್ ತಿಂಗಳ ವಾಡಿಕೆ ಮಳೆ ಪ್ರಮಾಣ 175.9 ಮಿಲಿ ಮೀಟರ್ ಆಗಿದ್ದು, ಕೇವಲ 99 ಮಿಲಿಮೀಟರ್‍ನಷ್ಟು ಮಾತ್ರ ಮಳೆಯಾಗಿದೆ.ಎರಡು ತಿಂಗಳಲ್ಲಿ ಶೇ.48.3ರಷ್ಟು ಮಳೆ ಕೊರತೆ ಕಂಡು ಬಂದಿದೆ.

ಒಟ್ಟಾರೆ ನವೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಶೇ.64ರಷ್ಟು ಮಳೆ ಕೊರತೆ ಕಂಡು ಬಂದಿದೆ.ನವೆಂಬರ್ ತಿಂಗಳ ವಾಡಿಕೆ ಪ್ರಮಾಣ ರಾಜ್ಯದಲ್ಲಿ 34 ಮಿಲಿಮೀಟರ್.ಆದರೆ, ಕೇವಲ 14 ಮಿಲಿಮೀಟರ್‍ನಷ್ಟು ಮಳೆಯಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ಅವರ ಪ್ರಕಾರ, ನವೆಂಬರ್ ತಿಂಗಳಿನಲ್ಲಿ ವಾಡಿಕೆ ಪ್ರಮಾಣದ ಮಳೆಯೂ ಆಗಲಿಲ್ಲ. ಹವಾ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಉತ್ತಮ ಮಳೆಯಾಗುವ ಸಾಧ್ಯತೆಗಳೂ ಇಲ್ಲ. ಹೀಗಾಗಿ ಚಳಿ ಹೆಚ್ಚಾಗುವ ಸಾಧ್ಯತೆಗಳಿವೆ. ಈಗಾಗಲೇ ವಾಡಿಕೆಗಿಂತ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‍ನಷ್ಟು ಕಡಿಮೆ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಳಿ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ