ಬೆಂಗಳೂರು, ನ.28- ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರು ಇಂದು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕೇಂದ್ರ ಕಚೇರಿ ಮುಂಭಾಗ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಳೆದ 10 ತಿಂಗಳಿಂದ ಬಾಕಿ ಉಳಿದಿರುವ ವೇತನವನ್ನು ತಕ್ಷಣ ನೀಡಬೇಕೆಂದು ಒತ್ತಾಯಿಸಿದರು.
ಇಂದು ಬಿಬಿಎಂಪಿ ಮಾಸಿಕ ಸಭೆ ಇರುವ ಹಿನ್ನೆಲೆಯಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಗಮನ ಸೆಳೆಯಲು ಈ ಪ್ರತಿಭಟನೆಯನ್ನು ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಇಎಸ್ಐ ಹಾಗೂ ಭವಿಷ್ಯ ನಿಧಿ ಪಾವತಿಸಬೇಕು ಎಂದು ಆಗ್ರಹಿಸಿದ ಕಾರ್ಯಕರ್ತೆಯರು ನಾವು ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ನಿರ್ವಹಣೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ. ಸರ್ಕಾರದ ಇತರ ಕೆಲಸಗಳಿಗೂ ನಮ್ಮನ್ನು ಬಳಸಲಾಗುತ್ತದೆ.ಆದರೆ, ಕಳೆದ 10 ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಹೀಗಾದರೆ ನಾವು ಜೀವನ ಸಾಗಿಸುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಆಗಮಿಸಿ ಪ್ರತಿಭಟನಾನಿರತರ ಅಹವಾಲು ಸ್ವೀಕರಿಸಿದರು.