ಬೆಂಗಳೂರು, ನ.27- ಮೇಕೆದಾಟು ಕುಡಿಯುವ ನೀರು ಯೋಜನೆ ಅನುಷ್ಠಾನ ಮಾಡುವ ಸಂಬಂಧ ತಮಿಳುನಾಡು ಸರ್ಕಾರದ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಅನುಷ್ಠಾನವಾಗುವುದರಿಂದ ರಾಜ್ಯಕ್ಕಾಗಲಿ ಅಥವಾ ತಮಿಳುನಾಡಿಗಾಗಲೀ ಯಾವುದೇ ತೊಂದರೆಯಾಗುವುದಿಲ್ಲ. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಕರ್ನಾಟಕಕ್ಕೆ ಅಗತ್ಯವಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಸಿದ್ಧ ಎಂದು ಹೇಳಿದರು.
ತಮಿಳುನಾಡು ಸರ್ಕಾರ ಮಾತುಕತೆಗೆ ಆಹ್ವಾನಿಸಿದರೆ ಖುದ್ದು ನಾನೇ ಹೋಗಲು ಸಿದ್ದನಿದ್ದೇನೆ. ಒಂದು ವೇಳೆ ತಮಿಳುನಾಡಿನಿಂದ ಬಂದರೂ ಮಾತುಕತೆ ನಡೆಸಲು ನಾವು ಸಿದ್ದ. ಇದರಲ್ಲಿ ಯಾವುದೇ ರಾಜ್ಯಗಳು ಪ್ರತಿಷ್ಠೆ ಮಾಡುವ ಅಗತ್ಯವಿಲ್ಲ. ನಮಗೆ ಕುಡಿಯುವ ನೀರು ಅಗತ್ಯವಿರುವುದರಿಂದ ಈ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. ಈಗಾಗಲೇ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ನೆರೆ ರಾಜ್ಯ ಯಾವ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಮಗೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಜಲ ಆಯೋಗ ಯೋಜನೆ ಆರಂಭಿಸಲು ನಮಗೆ ಅನುಮತಿ ನೀಡಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಯೋಜನೆಯ ರೂಪುರೇಷೆಗಳನ್ನು ತಿಳಿಸಲಾಗುವುದು. ಡಿ.6ರಂದು ಕರೆದಿರುವ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಮಾಜಿ ನೀರಾವರಿ ಸಚಿವರು, ಕಾನೂನು ತಜ್ಞರು ಭಾಗವಹಿಸಲಿದ್ದಾರೆ. ಅಲ್ಲಿ ಚರ್ಚಿಸಿ ಅಂತಿಮವಾದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ ಎಂದು ಹೇಳಿದರು.