ನಿಜಾಮಾಬಾದ್, ನ.27-ಸಬ್‍ಕಾ ಸಾಥಿ ಸಬ್‍ಕಾ ವಿಕಾಸ್(ಸರ್ವರ ಸ್ನೇಹಿ ಸರ್ವರ ವಿಕಾಸ್) ಬಿಜೆಪಿಯ ಮೂಲಮಂತ್ರ ಎಂದು ಪುನರುಚ್ಚಿಸಿದ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಮತ್ತು ಅವರ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‍ಎಸ್) ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭಾ ಚುನಾವಣಾ ಕಾವು ಏರುತ್ತಿರುವ ತೆಲಂಗಾಣದ ನಿಜಾಮಾಬಾದ್‍ನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ರೀತಿ ಏನು ಕೆಲಸ ಮಾಡದ ಮುಖ್ಯಮಂತ್ರಿ ಮತ್ತು ಟಿಆರ್‍ಎಸ್ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ ಎಂದು ಲೇವಡಿ ಮಾಡಿದರು.
ತೆಲಂಗಾಣ ಮುಖ್ಯಮಂತ್ರಿ ಅವರು ನಿಜಾಮಾಬಾದ್‍ನನ್ನು ಲಂಡನ್ ನಗರವನ್ನಾಗಿ ಮಾಡುವುದಾಗಿ ಬಡಾಯಿ ಕೊಚ್ಚಿಕೊಂಡಿದ್ಧಾರೆ. ಆದರೆ ಇಲ್ಲಿ ನೀರು, ವಿದ್ಯುತ್ ಮೊದಲಾದ ಮೂಲ ಸೌಕರ್ಯಗಳನ್ನೇ ಒದಗಿಸಿಲ್ಲ. ಯಾವುದೇ ಕೆಲಸ ಮಾಡದೇ ಕಾಲಹರಣ ಮಾಡಿದ ಈ ಸರ್ಕಾರಕ್ಕೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಓಟ್ ಬ್ಯಾಂಕ್ ರಾಜಕಾರಣ ಕೆಲಸ ಮಾಡುವುದಿಲ್ಲ ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್ ಕುಟುಂಬದಂತೆ ಕೆಸಿಆರ್ ಮತ್ತು ಅವರ ಕುಟುಂಬ ಯಾವುದೇ ಅಭಿವೃದ್ದಿ ಪಡ ಕೆಲಸಗಳನ್ನು ಮಾಡದೇ, ಮತ್ತೆ ಅಧಿಕಾರಕ್ಕೆ ಬರಬಹುದೆ ಎಂಬ ಭ್ರಮೆಯಲ್ಲಿದೆ. ಆದರೆ ಅದು ಈಢೇರದು ಎಂದು ಮೋದಿ ಭವಿಷ್ಯ ನುಡಿದರು.
ಅಭಿವೃದ್ದಿ, ವಿಕಸನ, ನವ ಭಾರತ ಮತ್ತು ನವ ತೆಲಂಗಾಣ ನಿರ್ಮಾಣದಲ್ಲಿ ನಂಬಿಕೆ ಉಳ್ಳವರು ಬಿಜೆಪಿಯನ್ನು ನಂಬಿ ಧೈರ್ಯದಿಂದ ಮತ ಚಲಾಯಿಸಿ ಎಂದು ಅವರು ಸಲಹೆ ಮಾಡಿದರು.