ಬಳ್ಳಾರಿಯಲ್ಲಿ ಈ ಬಾರಿ ಭೀಕರ ಬರಗಾಲ ಇರುವುದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದ್ದ ಹಂಪಿ ಉತ್ಸವವನ್ನು ಮುಂದೂಡಲಾಗಿದೆ. ಮುಂದಿನ ವರ್ಷ ಯಥಾ ಪ್ರಕಾರ ನಡೆಯಲಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಿಲ್ಲೆಯ 9 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲಿ ಹಂಪಿ ಉತ್ಸವವನ್ನು ಆಚರಣೆ ಮಾಡುವುದು ಅಷ್ಟು ಸಮಂಜಸವಲ್ಲ ಎಂದು ಕೆಲವರು ಸಲಹೆ ನೀಡಿದ್ದಾರೆ. ಜತೆಗೆ ಉತ್ಸವವನ್ನು ಆಚರಿಸಬೇಕೆಂದರೆ ಕನಿಷ್ಠ ಒಂದು ತಿಂಗಳು ಮುಂಚಿತವಾಗಿ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಜಿಲ್ಲಾಡಳಿತದ ಜತೆ ಚರ್ಚಿಸಿ ಉತ್ಸವವನ್ನು ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಮಗೆ ಉತ್ಸವ ಆಚರಿಸಬೇಕೆಂಬ ಅಭಿಲಾಷೆ ಇತ್ತು. ಆದರೆ, ಜಿಲ್ಲೆಯ ಜನತೆ ಬರಗಾಲದಿಂದ ತತ್ತರಿಸಿರುವಾಗ ಉತ್ಸವ ಆಚರಿಸುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಇಂತಹ ತೀರ್ಮಾನ ಕೈಗೊಂಡಿದ್ದೇವೆ. ಜಿಲ್ಲೆಯ ಎಲ್ಲಾ ಶಾಸಕರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಂತೆ ಗಣಿಗಾರಿಕೆ ಉದ್ಯಮಿಗಳು, ಕೈಗಾರಿಕೆ ಉದ್ಯಮಿಗಳ ಜತೆ ಚರ್ಚೆ ನಡೆಸಲಾಗಿದೆ. ಯಾವ್ಯಾವ ಭಾಗದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸಿಕೊಡಬೇಕು ಎಂಬುದರ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇವೆ. ಪ್ರತಿಯೊಂದು ತಾಲ್ಲೂಕುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರ ಜತೆ ಚರ್ಚಿಸಲಾಗುವುದು. ಇನ್ನು ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಗ್ರಾಪಂ ಸದಸ್ಯರಿಂದ ಹಿಡಿದು ಎಲ್ಲಾ ಜನಪ್ರತಿನಿಧಿಗಳು, ಪ್ರತಿಯೊಂದು ಇಲಾಖೆ ಅಧಿಕಾರಿಗಳು, ಡಿಸಿ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೇರಿದಂತೆ ಪ್ರತಿಯೊಬ್ಬರೂ ಗ್ರಾಮದಲ್ಲೇ ಕುಳಿತು ಜನರ ಸಮಸ್ಯೆ ಆಲಿಸಬೇಕು. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲೇ ಕುಳಿತು ಕೆಲಸ ಮಾಡುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಸಿದರು.