ವಿಶ್ವವಿಖ್ಯಾತ ಕರಾಟೆ ಪಟು ಮತ್ತು ಚಿತ್ರನಟ ಬ್ರೂಸ್ ಲೀ ಜನ್ಮದಿನ

ಚೀನಾ,ನ.27- ಬ್ರೂಸ್ ಲೀ-ಈ ಹೆಸರನ್ನು ಕೇಳಿದೊಡನೆ ಪ್ರಪಂಚದ ಕರಾಟೆ ಪಟುಗಳು ಪುಳಕಗೊಳ್ಳುತ್ತಾರೆ. ವಿಶ್ವವಿಖ್ಯಾತ ಕರಾಟೆ ಪಟು ಮತ್ತು ಚಿತ್ರನಟ ಬ್ರೂಸ್ ಲೀ ಬಹುಮುಖ ಪ್ರತಿಭೆಯ ತಾರೆ. ಇಂದು ಬ್ರೂಸ್ ಲೀ ಜನ್ಮದಿನ.

ಬ್ರೂಸ್ ಲೀ-ಮಾರ್ಷಲ್ ಆರ್ಟಿಸ್ಟ್, ಚಿತ್ರನಟ, ತತ್ತ್ವಜ್ಞಾನಿ ಮತ್ತು ಚಿತ್ರ ನಿರ್ಮಾಪಕ ಹಾಗೂ ಸಮರ ಕಲೆ ಜೀಟ್‍ಕುನ್ ಡೊ ಸಂಸ್ಥಾಪಕ. ಬ್ರೂಸ್ ಲೀ ಜನಿಸಿದ್ದು ನವೆಂಬರ್ 27, 1940ರಲ್ಲಿ. ಇವರ ಮೂಲ ಹೆಸರು ಲೀ ಜುನ್-ಫ್ಯಾನ್. ಲೀ ನಾಟಕ ಕಲಾವಿದ ಮತ್ತು ಕ್ಯಾಂಟೋನಿಸ್ ಓಪೆರಾ ಅಭಿನೇತ ಲೀ ಹೊಯ್-ಚ್ಯುನ್ ಅವರ ಪುತ್ರ. ಬ್ರೂಸ್ ಲೀಯನ್ನು ಕರಾಟೆ ಜಗತ್ತಿನ ಸರ್ವಕಾಲಿಕ ಅತ್ಯಂತ ಪ್ರಭಾವಿ ಪಟು ಎಂದು ಮಾರ್ಷಲ್ ಕ್ಷೇತ್ರ ಪರಿಗಣಿಸಿದೆ ಹಾಗೂ ಇವರಿಗೆ 20ನೇ ಶತಮಾನದ ಮಾರ್ಷಲ್ ಕಲೆಯ ವಿಶ್ವಧೂತ ಎಂಬ ಪುರಸ್ಕಾರ ನೀಡಲಾಗಿದೆ. ಏಷ್ಯನ್ನರನ್ನು ಪರಿವರ್ತನೆಯ ಹಾದಿಗೆ ತರಲು ಬ್ರೂಸ್ ಲೀ ಶ್ರಮಿಸಿದ ಸಂಗತಿಯನ್ನು ಅಮೆರಿಕನ್ ಸಿನಿಮಾಗಳಲ್ಲೂ ಪ್ರತಿಬಿಂಬಿಸಲಾಗಿದೆ.

ಬ್ರೂಸ್ ಲೀ ನವೆಂಬರ್ 27, 1940ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಸ್ಯಾನ್‍ಫ್ರಾನ್ಸಿಸ್ಕೋದ ಚೈನಾಟೌನ್‍ನಲ್ಲಿ ಜನಿಸಿದರು. ಇವರ ತಂದೆ-ತಾಯಿ ಹಾಂಕಾಂಗ್‍ನವರು. ಬಾಲ್ಯದ ದಿನಗಳನ್ನು ಹಾಂಕಾಂಗ್‍ನ ಕೌವ್‍ಲೂನ್‍ನಲ್ಲಿ ಲೀಗೆ ತಂದೆ ಕರಾಟೆ ಕಲಿಯುವಂತೆ ಪ್ರೋತ್ಸಾಹ ನೀಡಿದರು. ಮನರಂಜನೆ ಮಾಧ್ಯಮದೊಂದಿಗೆ ಸಂಪರ್ಕವಿದ್ದ ತಂದೆ ಮಗನನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದರು. ಹಲವಾರು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ನಟಸಿ ಲೀ ಗಮನಸೆಳೆದರು.

ನಂತರ ತಮ್ಮ 18ನೇ ವಯಸ್ಸಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಬ್ರೂಸ್ ಅಮೆರಿಕಗೆ ತೆರಳಿದರು. ಸಿಯಾಟಲ್‍ನ ಯೂನಿವರ್ಸಿಟಿ ಆಫ್ ವಾಷಿಂಗ್ಟನ್‍ನಲ್ಲಿ ಶಿಕ್ಷಣ ಪಡೆದರು. ಇದೇ ವೇಳೆ ಕರಾಟೆಯಲ್ಲಿ ಸಿದ್ಧಹಸ್ತರಾಗುತ್ತಾ ಮಾರ್ಷಲ್ ಆಟ್ರ್ಸ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತಿದ್ದರು.

ಬ್ರೂಸ್ ಲೀ ಪ್ರತಿಭೆ ಮತ್ತು ಕರಾಟೆ ಸಾಮಥ್ರ್ಯವನ್ನು ಗಮನಿಸಿ ಹಾಂಕಾಂಗ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಅವಕಾಶ ನೀಡಲಾಯಿತು. ಸಾಂಪ್ರದಾಯಿಕ ಚೀನಿ ಮಾರ್ಷಲ್ ಆಟ್ರ್ಸ್ ಸಿನಿಮಾಗಳು ಇವರನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯಿತು. 1970ರಿಂದ ಬ್ರೂಸ್ ಲೀ ವಿಶ್ವದ ಸಮರ ಕಲೆಯ ಚಕ್ರವರ್ತಿಯಾಗಿ ಮೆರೆದರು. ಅವಕಾಶಗಳ ಮಹಾಪೂರವೇ ಹರಿದುಬಂದಿತು.

ಬ್ರೂಸ್ ಲೀ ನಟಿಸಿದ ಐದು ಚಿತ್ರಗಳು ಈಗಲೂ ಅತ್ಯಂತ ಜನಪ್ರಿಯ ಸಿನಿಮಾಗಳು ಎಂದೇ ಲೋಕವಿಖ್ಯಾತವಾಗಿದೆ. 1971ರಲ್ಲಿ ತೆರೆಕಂಡ ದಿ ಬಿಗ್ ಬಾಸ್, 1972ರಲ್ಲಿ ಬಿಡುಗಡೆಯಾದ ಫಿಸ್ಟ್ ಆಫ್ ಫ್ಯೂರಿ ಚಿತ್ರಗಳು ಅತಿ ಕಡಿಮೆ ಅವಧಿಯಲ್ಲಿ ಲೀಗೆ ವಿಶ್ವದ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟವು. 1972ರಲ್ಲಿ ಗೋಲ್ಡನ್ ಹಾರ್ವೆಸ್ಟ್‍ನ ವೇ ಆಫ್ ದಿ ಡಾಗನ್ ಬಿಡುಗಡೆಯಾಯಿತು. ಬ್ರೂಸ್‍ಲಿ ಚಿತ್ರಕಥೆ ಬರೆದು ನಿರ್ದೇಶಿಸಿದ 1973ರಲ್ಲಿ ಬಿಡುಗಡೆಯಾದ ಎಂಟರ್ ದಿ ಡ್ರಾಗನ್ ವಿಶ್ವಾದ್ಯಂತ ಹೊಸ ದಾಖಲೆ ಸೃಷ್ಟಿಸಿತು. ನಂತರ ತೆರೆಕಂಡ ರಿಟರ್ನ್ ಆಫ್ ದಿ ಡ್ರಾಗನ್ ಸಿನಿಮಾ ಕೂಡ ಸಾಕಷ್ಟು ಸದ್ದು ಮಾಡಿತು.

ಬ್ರೂಸ್ ಲೀ ಜುಲೈ 20, 1973ರಲ್ಲಿ ನಿಧನರಾದರು. ಬ್ರೂಸ್ ಲೀ ನಟಿಸಿದ ಕೊನೆ ಸಿನಿಮಾ ದಿ ಗೇಮ್ ಆಫ್ ದಿ ಡೆತ್. ಚೀನಾದ ಸಾಮಾನ್ಯ ಕರಾಟೆ ಪಟುವೊಬ್ಬ ಮಾರ್ಷಲ್ ಲೋಕದ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದು ಒಂದು ಅದ್ಭುತ ಸಾಧನೆ. ಚೀನಾದ ನ್ಯಾಷನಲ್ ಹೀರೋ ಎಂದು ಪರಿಗಣಿಸಲ್ಪಟ್ಟಿದ್ದ ಬ್ರೂಸ್ ಲೀ ಕರಾಟೆಯ ಹೊಸ ಪರಿಕಲ್ಪನೆಯ ಜೊತೆ ಜೊತೆಗೆ ತತ್ತ್ವಜ್ಞಾನವನ್ನೂ ಸಹ ಬೋಧಿಸುತ್ತಿದ್ದರು. ಅವರು ಅನೇಕ ಶಿಷ್ಯರನ್ನು ಮಾರ್ಷಲ್ ಆಟ್ರ್ಸ್ ಲೋಕಕ್ಕೆ ನೀಡಿದ್ದಾರೆ. ಬ್ರೂಸ್ ಲೀ ನಟಿಸಿದ್ದ ಕೊನೆ ಸಿನಿಮಾ ದಿ ಗೇಮ್ ಆಫ್ ಡೆತ್ 1978ರಲ್ಲಿ ತೆರೆಕಂಡಿತು. ಕರಾಟೆ ಪಟುಗಳು ಮತ್ತು ಮಾರ್ಷಲ್ ಆಟ್ರ್ಸ್ ಅಭ್ಯಾಸ ಮಾಡುವವರಿಗೆ ಬ್ರೂಸ್ ಲೀ ಪ್ರೇರಕ ಶಕ್ತಿ ಮತ್ತು ಆರಾಧ್ಯ ದೈವ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ