ಕಾಂಗ್ರೆಸ್ ಅಭ್ಯರ್ಥಿ ವಂಟೇರು ಪ್ರತಾಪ್ ರೆಡ್ಡಿ ಮೇಲೆ ಪೊಲೀಸರು ದಾಳಿ ನಡೆಸಿದ ನಂತರ ನಿನ್ನೆ ತಡರಾತ್ರಿ ಆತ್ಮಹತ್ಯೆಗೆ ಯತ್ನ

ಹೈದರಾಬಾದ್, ನ.27(ಪಿಟಿಐ)- ವಿಧಾನಸಭಾ ಚುನಾವಣಾ ಕಾವು ಗರಿಷ್ಠಮಟ್ಟ ತಲುಪಿರುವ ತೆಲಂಗಾಣ ನಿನ್ನೆ ಮಧ್ಯರಾತ್ರಿ ರಾಜಕೀಯ ಹೈಡ್ರಾಮಾವೊಂದು ನಡೆದಿದೆ. ಉಸ್ತುವಾರಿ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‍ಎಸ್) ನಾಯಕ ಕೆ.ಸಿ.ಚಂದ್ರಶೇಖರ್ ರಾವ್ ಅವರ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ವಂಟೇರು ಪ್ರತಾಪ್ ರೆಡ್ಡಿ ಮೇಲೆ ಪೊಲೀಸರು ದಾಳಿ ನಡೆಸಿದ ನಂತರ ನಿನ್ನೆ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.

ಪ್ರತಿಷ್ಠಿತ ಗಜ್ವೆಲ್ ವಿಧಾನಸಭಾ ಕ್ಷೇತ್ರದಿಂದ ಕೆಸಿಆರ್ ವಿರುದ್ಧ ಸ್ಫರ್ಧಾ ಕಣದಲ್ಲಿರುವ ಪ್ರತಾಪ್‍ರೆಡ್ಡಿ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಹತ್ತಿರದ ಪೊಲೀಸ್ ಠಾಣೆ ಮುಂದೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಇದೊಂದು ರಾಜಕೀಯ ನಾಟಕ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಮತದಾರರಿಗೆ ಹಣದ ಮತ್ತು ಮದ್ಯ ಹಂಚಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನ ಪೆಟ್‍ವಷೀರಾಬಾದ್ ಠಾಣೆ ಪೊಲೀಸರು ರೆಡ್ಡಿ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆದರೆ ಯಾವುವೇ ಅಕ್ರಮ ಮದ್ಯ ಮತ್ತು ಹಣ ಪತ್ತೆಯಾಗಲಿಲ್ಲ.

ತಮ್ಮ ಮನೆ ಮೇಲೆ ನಡೆದ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಅವರ ಬೆಂಬಲಿಗರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಧರಣಿ ನಡೆಸುತ್ತಿದ್ದರು. ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ರೆಡ್ಡಿ ಅವರನ್ನು ತಡೆಯಲು ಮುಂದಾದಾಗ ರೆಡ್ಡಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಆಡಿದರು ಎಂದು ಸೈಬರಾಬಾದ್‍ನ ಬಾಲನಗರ ಉಪ ಪೊಲೀಸ್ ಆಯುಕ್ತ ಪಿ.ವಿ.ಪದ್ಮರಾಜ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ