ವಾಷಿಂಗ್ಟನ್: ಮುಂಬೈ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ದಾಳಿಗೆ ಇಂದಿಗೆ ಹತ್ತು ವರ್ಷ. ದಾಳಿ ನಡೆದ ಕರಾಳ ದಿನವಾದ ಇಂದು ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪೆಯೊ ಅವರು ಪಾಕಿಸ್ತಾನ ಸೇರಿ ಇತರೆ ದೇಶಗಳನ್ನು ಮಾತುಕತೆಗೆ ಆಹ್ವಾನಿಸಿದ್ದು, ಲಷ್ಕರ್- ಎ-ತೋಯ್ಬಾ ಸೇರಿ ಇತರೆ ಉಗ್ರ ಸಂಘಟನೆಗಳ ನಿಗ್ರಹಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿಯಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದವರ ಬಗ್ಗೆ ಮತ್ತು ವೈಯಕ್ತಿಕವಾಗಿ ದಾಳಿಯ ಯೋಜನೆ ರೂಪಿಸಿದವರ ಬಗ್ಗೆ ಮಾಹಿತಿ ನೀಡಿದವರಿಗೆ 35 ಕೋಟಿ ರೂ. ನೀಡುವುದಾಗಿ ಅಮೆರಿಕದ ರಿವಾರ್ಡ್ ಫಾರ್ ಜಸ್ಟಿಸ್ (ಆರ್ಎಫ್ಜೆ) ಹೊಸದಾಗಿ ಬಹುಮಾನ ಘೋಷಿಸಿದೆ.
ಉಗ್ರ ದಾಳಿಗೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಾತನಾಡಿರುವ ಮೈಕ್ ಪೊಂಪೆಯೋ ಅವರು, “ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಪ್ರತಿಭಟಿಸುತ್ತಿದೆ. ದಾಳಿ ನಡೆದು ಹತ್ತು ವರ್ಷಗಳು ಕಳೆದರೂ ದಾಳಿ ಯೋಜನೆಯ ರೂವಾರಿಗಳು ಇನ್ನೂ ಆರೋಪಿಗಗಳಾಗಿಲ್ಲ,” ಎಂದು ವಿಷಾದ ವ್ಯಕ್ತಪಡಿಸಿದರು.
“ಭಯೋತ್ಪಾದನೆ ನಾಶಕ್ಕೆ ವಿಶ್ವಸಂಸ್ಥೆ ಭದ್ರತಾ ಸಮಿತಿ ರೂಪಿಸಿರುವ ನೀತಿ ನಿಯಮಗಳನನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲು ಎಲ್ಲ ದೇಶಗಳನ್ನು ಮುಖ್ಯವಾಗಿ ಪಾಕಿಸ್ತಾನವನ್ನು ಇಂದು ಮಾತುಕತೆಗೆ ಆಹ್ವಾನಿಸಲಾಗಿದೆ,” ಎಂದು ಮೈಕ್ ಹೇಳಿದರು.
ಲಷ್ಕರ್ ಇ ತೊಯ್ಬಾ ಸಂಘಟನೆಯ 10 ಮಂದಿ ಉಗ್ರರು 26/11/18ರಂದು ನಡೆಸಿದ ಈ ದಾಳಿಯಲ್ಲಿ ಅಮೆರಿಕನ್ನರು ಸೇರಿ 166 ಮಂದಿ ಬಲಿಯಾಗಿದ್ದರು. ಇವರಿಲ್ಲಿ ಒಂಬತ್ತು ಜನ ಉಗ್ರರನ್ನು ಪೊಲೀಸರು ಹೊಡೆದುರಳಿಸಿ, ಅಜ್ಮಲ್ ಕಸಬ್ ಎಂಬಾತನನ್ನು ಜೀವಂತವಾಗಿ ಸೆರೆ ಹಿಡಿದಿದ್ದರು. ಆನಂತರ ಭಾರತದ ನ್ಯಾಯಾಲಯ ಕಸಬ್ಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಅದರಂತೆ 2012ರಲ್ಲಿ ಕಸಬ್ನನ್ನು ಗಲ್ಲಿಗೆ ಏರಿಸಲಾಗಿತ್ತು.
“ಈ ದಾಳಿಯ ರೂವಾರಿಗಳನ್ನು ಬಂಧಿಸಲು ನಾವು ಕಟಿಬದ್ಧರಾಗಿದ್ದೇವೆ. ಅಮೆರಿಕದ ರಾಜ್ಯ ಇಲಾಖೆ ರಿವಾರ್ಡ್ ಫಾರ್ ಜಸ್ಟೀಸ್, ಮುಂಬೈ ದಾಳಿಯ ಯೋಜನೆ ರೂಪಿಸಿದ ರೂವಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 35 ಕೋಟಿ ನೀಡುವುದಾಗಿ ಹೊಸ ಬಹುಮಾನ ಘೋಷಿಸಿದೆ,” ಎಂದು ಮೈಕ್ ತಿಳಿಸಿದರು.