ಜಾಫರ್ ಶರೀಫ್ ಅಂತಿಮ ದರ್ಶನ ಪಡೆದ ಗಣ್ಯಾತಿಗಣ್ಯರು

ಬೆಂಗಳೂರು, ನ.26-ನಿನ್ನೆ ನಿಧನರಾದ ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ಅಂತ್ಯಕ್ರಿಯೆ ನಗರದಲ್ಲಿಂದು ನಡೆಯಿತು.

ಇದಕ್ಕೂ ಮುನ್ನ ಜಾಫರ್ ಶರೀಫ್ ಅವರ ಮನೆಗೆ ಗಣ್ಯಾತಿಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ಶಾಸಕರಾದ ಮುನಿರತ್ನ, ಹಿರಿಯ ಮುಖಂಡರಾದ ಗುಲಾಬ್ ನಭಿ ಹಾಜಾದ್, ಸುಬ್ಬಯ್ಯ ಶೆಟ್ಟಿ, ಸೋಮಶೇಖರ್, ಎಚ್.ಟಿ.ಸಾಂಗ್ಲಿಯಾನ ಮತ್ತಿತರರು ಜಾಫರ್ ಶರೀಫ್ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ನಂತರ ಫ್ರೇಜರ್‍ಟೌನ್ ನಿವಾಸದಿಂದ ಕೆಪಿಸಿಸಿ ಕಚೇರಿಗೆ ಪಾರ್ಥಿವ ಶರೀರವನ್ನು ತಂದು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಜಾಫರ್ ಶರೀಫ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಅಲ್ಲಿಂದ ನಂದಿದುರ್ಗ ರಸ್ತೆಯ ಕುದುಸ್‍ಸಾಬ್ ಕಬರ್‍ಸ್ತಾನ್‍ದಲ್ಲಿ ಇಸ್ಲಾಂ ಧರ್ಮದ ವಿಧಿ ಅನುಸಾರ ಅಂತ್ಯಕ್ರಿಯೆ ನಡೆಸಲಾಯಿತು. ಇದಕ್ಕೂ ಮೊದಲು ಖಾದ್ರಿಯಾ ಮಸಿದೀಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಜಾಫರ್ ಶರೀಫ್ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ.ವೇಣುಗೋಪಾಲ್ ಅವರು, ಜಾಫರ್ ಶರೀಫ್ ಅವರ ನಿಧನದಿಂದ ಕಾಂಗ್ರೆಸ್‍ಗೆ ತುಂಬಲಾರದ ನಷ್ಟವಾಗಿದೆ. ಜಾಫರ್ ಶರೀಫ್ ರಾಜ್ಯಕ್ಕಷ್ಟೇ ಅಲ್ಲದೆ ದೇಶದಲ್ಲೇ ಅಗ್ರಗಣ್ಯ ನಾಯಕರು. ಜಾತ್ಯಾತೀತ ತತ್ವ ಸಿದ್ದಾಂತಕ್ಕೆ ಅವರ ಕೊಡುಗೆ ಅಪಾರ. ಉತ್ತಮ ಆಡಳಿತಗಾರರಾಗಿದ್ದ ಜಾಫರ್ ಅವರು, ಹೊಸ ರೈಲ್ವೆ ಯೋಜನೆಗಳನ್ನು ಜಾರಿಗೊಳಿಸಿದರು. ನಿನ್ನೆ ಅವರ ಅಕಾಲಿಕ ನಿಧನ ನಮಗೆ ಆಘಾತಕಾರಿ ಸುದ್ದಿಯಾಗಿದೆ. ಪಕ್ಷ ಹಾಗೂ ರಾಷ್ಟ್ರಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ದುಃಖಿಸಿದರು.

ನಾನು ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿಯಾದಾಗ ಮೊದಲ ಬಾರಿ ಅವರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದೆ. ಅವರ ನಿಧನದಿಂದ ಆಘಾತಕ್ಕೊಳಗಾಗಿರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಶೋಕ ಸಂದೇಶವನ್ನು ಕುಟುಂಬ ವರ್ಗಕ್ಕೆ ತಲುಪಿಸಲಾಗಿದೆ ಎಂದರು.
ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ದೇಶದ ದೊಡ್ಡ ನಾಯಕರಾಗಿ ಬೆಳೆದ ಜಾಫರ್ ಶರೀಫ್ ಅವರು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂದಿರಾಗಾಂಧಿ, ರಾಜೀವ್‍ಗಾಂಧಿ ಅವರ ಜತೆಯಲ್ಲಿ ಕೆಲಸ ಮಾಡಿದ್ದಾರೆ. 1978ರಲ್ಲಿ ಕಾಂಗ್ರೆಸ್ ವೀಕ್ಷಕರಾಗಿದ್ದ ಅವರು, ನನಗೆ ವಿಧಾನಸಭೆಯಿಂದ ಸ್ಪರ್ಧಿಸಲು ಟಿಕೆಟ್ ನೀಡಿ ಅವಕಾಶ ಮಾಡಿಕೊಟ್ಟಿದ್ದರು. 2014ರಲ್ಲಿ ಅವರು ಮೈಸೂರಿನಿಂದ ಸ್ಪರ್ಧಿಸಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಾಗ ನಾನು ಅವರೊಂದಿಗೆ ಚರ್ಚೆ ನಡೆಸಿದ್ದೆ. ನೀವು ಬರುವುದಾದರೆ ನಾವೆಲ್ಲ ಸೇರಿ ನಿಮಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೆ. ಜನತಾಂತ್ರಿಕ ನಾಯಕರಾಗಿ ಬೆಳೆದ ಜಾಫರ್ ಶರೀಫ್ ಅವರ ನಿಧನ ತುಂಬಲಾರದ ನಷ್ಟ ಎಂದರು.

ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕೆಂಗಲ್ ಹನುಮಂತಯ್ಯ ಅವರ ನಂತರ ಬೆಂಗಳೂರಿನ ಪ್ರತಿಷ್ಠೆ ಹೆಚ್ಚಿಸಿದವರು ಜಾಫರ್ ಶರೀಫ್. ರೈಲ್ವೆ ಸಚಿವರಾಗಿದ್ದಾಗ ಬೆಂಗಳೂರಿನ ಯಲಹಂಕಾದಲ್ಲಿ ಗಾಲಿ ಮತ್ತು ಅಚ್ಚು ಕಾರ್ಖಾನೆ ಸ್ಥಾಪಿಸಿದರು. ರಾಷ್ಟ್ರದಲ್ಲೇ ಬ್ರಾಡ್ಗೇಜ್ ಯೋಜನೆಗೆ ನಾಂದಿಹಾಡಿದರು. ದೇಶದ ಹಿತ ಚಿಂತಕರಾಗಿದ್ದರು. ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರ ಪೈಕಿ ಜಾಫರ್ ಶರೀಫ್ ಕೊನೆಯ ಕೊಂಡಿ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾಗದೆ ದೇಶದಲ್ಲೇ ಅತ್ಯಂತ ಹೆಸರು ಪಡೆದವರು ಎಂದರು.

ಸಿ.ಎಂ.ಇಬ್ರಾಹಿಂ ಮಾತನಾಡಿ, ಎರಡು ತಿಂಗಳಿನಿಂದ ರಾಜ್ಯದಲ್ಲಿ ಉನ್ನತ ನಾಯಕರ ನಿರ್ಗಮನ ಹೆಚ್ಚಾಗಿದೆ. ಅನಂತ್‍ಕುಮಾರ್, ಅಂಬರೀಶ್, ಜಾಫರ್ ಶರೀಫ್ ಇವರ ಅಗಲಿಕೆ ತುಂಬಲಾರದ ನಷ್ಟ. ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿಯುತ್ತಾ 85 ವರ್ಷ ಸುದೀರ್ಘ ಜೀವನ ನಡೆಸಿದ ಜಾಫರ್ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದರು.
ಕೆ.ಬಿ.ಕೋಳಿವಾಡ ಮಾತನಾಡಿ, ಕಾಂಗ್ರೆಸ್ ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಸೇರಿ ರಾಜಕೀಯದ ಅತಿ ಉನ್ನತ ನಾಯಕರಾಗಿ ಬೆಳೆದರು. 1972ರಿಂದಲೂ ನಾನು ಅವರ ಜತೆಯಲ್ಲಿದ್ದೆ. ನೇರ, ನಿಷ್ಟೂರವಾದಿ, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ತಪ್ಪುಗಳನ್ನು ಬಿಚ್ಚು ಮನಸ್ಸಿನಿಂದ ಮಾತನಾಡಿದ ದಿಟ್ಟ ನಾಯಕ ಎಂದ ಅವರು, ಅದೇ ರೀತಿ ಅಂಬರೀಶ್ ಕೂಡ ರಾಜ್ಯದ ಉನ್ನತ ನಾಯಕರು. ರಾಜಕೀಯ ಮುತ್ಸದ್ದಿತನವನ್ನು ಬೆಳೆಸಿಕೊಂಡಿದ್ದರೆ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳಿದ್ದವು. ರಮ್ಯ ಅವರ ಸಾಕು ತಂದೆ ನಾರಾಯಣ ಅವರ ಜತೆ ಅಂಬರೀಶ್ ಹಾಗೂ ನಾನು ಸದಾ ಕಾಲ ಚರ್ಚೆ ಮಾಡುತ್ತಿದ್ದವು. ಆಗ ನಾನು ಅಂಬರೀಶ್ ಅವರಿಗೆ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹೇಳುತ್ತಿದೆ. ಆದರೆ, ಅದ್ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ತಮ್ಮತನ ಬಿಟ್ಟುಕೊಡಲಿಲ್ಲ ಎಂದು ಶೋಕ ವ್ಯಕ್ತಪಡಿಸಿದರು.

ಮಾಜಿ ಶಾಸಕ ಸುಬ್ಬಯ್ಯ ಶೆಟ್ಟಿ ಮಾತನಾಡಿ, 1969ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಇಲ್ಲಿ ದೇವರಾಜ ಅರಸು ಪಕ್ಷದ ಸಂಚಾಲಕರಾಗಿದ್ದರು. ಅವರು ಸಭೆ ಕರೆದಾಗ ಕಾಂಗ್ರೆಸ್‍ನ 20 ಮಂದಿ ನಾಯಕರು ಮಾತ್ರ ಭಾಗವಹಿಸಿದ್ದರು. ಅದರಲ್ಲಿ ನಾನು, ಜಾಫರ್ ಶರೀಫ್ ಅವರುಗಳಿದ್ದೆವು. ಅಂದಿನಿಂದಲೂ ಅವರು ಕಾಂಗ್ರೆಸ್ ಜತೆಯಲ್ಲೇ ಬದುಕಿದರು ಎಂದರು.
ಜಾಫರ್ ಶರೀಫ್ ನನಗೆ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದು ವಿ.ಎಸ್.ಉಗ್ರಪ್ಪ ಸ್ಮರಿಸಿದರು. ಅಂತಹ ಮಾರ್ಗದರ್ಶಕನನ್ನು ನಾವು ಕಳೆದುಕೊಂಡಿದ್ದೇವೆ. ಇಂತಹ ಹಿರಿಯ ನಾಯಕರ ಆದರ್ಶ ಪಾಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಬೇಕಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ