ಜಾಫರ್​​​ ಷರೀಫ್​​ಗೆ​ ಗಣ್ಯರಿಂದ ಅಂತಿಮ ನಮನ: ಈದ್ಗಾ ಖುದ್ದೂಸ್‌ನಲ್ಲಿ ಇಂದು ಅಂತ್ಯಕ್ರಿಯೆ

ಬೆಂಗಳೂರುಕಾಂಗ್ರೆಸ್​​ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಜಾಫರ್​​ ಷರೀಫ್​​ ಅವರ ಅಂತಿಮ ದರ್ಶನ ಪಡೆಯಲು, ಇಂದು ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯನವರು ಸೇರಿದಂತೆ ರಾಜ್ಯ ಕಾಂಗ್ರೆಸ್​​ ನಾಯಕರು ಜಾಫರ್​​ ಷರೀಫರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅಲ್ಲದೇ ಮಾಜಿ ಕೇಂದ್ರ ಸಚಿವರ ಅಂತ್ಯಕ್ರಿಯೆ ಇಂದು(ಸೋಮವಾರ) ಮಧ್ಯಾಹ್ನ 1.30ಕ್ಕೆ ಈದ್ಗಾ ಖುದ್ದೂಸ್‌ನಲ್ಲಿ ನಡೆಯಲಿದ್ದು, ಅಂತಿಮ ದರ್ಶನಕ್ಕಾಗಿ ರಾಷ್ಟ್ರೀಯ ಅಗ್ರಗಣ್ಯ ನಾಯಕರು ಆಗಮಿಸಲಿದ್ದಾರೆ ಎನ್ನಲಾಗಿದೆ.

ತನ್ನ ಪುತ್ರನ ಅಗಲಿಕೆ ನಂತರ ಜಾಫರ್​​​ ಷರೀಫರು ವಯೋಮಾನ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಬಳಿಕ ಅವರಿಗೆ ಬೈಪಾಸ್‌ ಸರ್ಜರಿ ಕೂಡ ಮಾಡಲಾಯಿತು. ಕಳೆದ ಎರಡು ವರ್ಷಗಳಿಂದ ಉಸಿರಾಟದ ತೊಂದರೆ ಕಾರಣದಿಂದಾಗಿ ಅನಾರೋಗ್ಯಕ್ಕೀಡಾಗಿದ್ದ ಕಾಂಗ್ರೆಸ್ ಪಕ್ಷನಿಷ್ಠೆ ನಾಯಕರ​ ಕಿಡ್ನಿ ವಿಫಲಗೊಂಡಿತ್ತು. ನಂತರ ಕನ್ನಿಂಗ್​​ ಹ್ಯಾಮ್​​ ಬಳಿಯ ಪೋರ್ಟಿಸ್​​ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯ್ತು. ಮೂರು ದಿನದಿಂದ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಇವರು, ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.

ಕಂಬನಿಮಿಡಿದ ಗಣ್ಯರುಹಿರಿಯ ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರು ದಿಢೀರ್‌ ನಿಧನ ಹೊಂದಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್‌ ಅವರು ಸಂತಾಪ ಸೂಚಿಸಿದ್ದಾರೆ. ಇನ್ನು ಅಂಬರೀಶ್‌ ಅವರ ಸಾವಿನ ಸುದ್ದಿಯಿಂದ ಹೊರ ಬರುವ ಮುನ್ನವೇ ಮತ್ತೊಂದು ಆಘಾತವಾಗಿದೆ. ಜಾಫರ್‌ ಷರೀಫ್‌ ಅವರು ನಮ್ಮನ್ನಗಲಿದ್ದಾರೆ. ಕಾಂಗ್ರೆಸ್‌ನ ಹಿರಿಯ ಚೇತನ ಭಾರತೀಯ ರೈಲ್ವೆಗೆ ಅಪಾರ ಕೊಡುಗೆ ನೀಡಿದರು. ಕರ್ನಾಟಕಕ್ಕೆ ಹಲವು ಹೊಸ ರೈಲ್ವೆ ಯೋಜನೆಗಳನ್ನು ತಂದಿದ್ದರು. ಷರೀಫರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ರಾಹುಲ್ ಗಾಂಧಿ ಅವರು ಕೂಡ ಸಂತಾಪ ಸೂಚಿಸಿದ್ದಾರೆ.
ಇನ್ನು ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್​​ ಸಂಸದ ಕೆಎಚ್​​ ಮುನಿಯಪ್ಪ, ಸಚಿವ ಡಿಕೆ ಶಿವಕುಮಾರ್​​, ಸಚಿವ ಕೆಜೆ ಜಾರ್ಜ್​​, ಡಿಸಿಎಂ ಡಾ.ಜಿ ಪರಮೇಶ್ವರ್​​, ಮಾಜಿ ಪ್ರಧಾನಿ ದೇವೆಗೌಡ,  ಸಿ.ಎಂ.ಇಬ್ರಾಹಿಂ, ಹೆಚ್​.ವಿಶ್ವನಾಥ್, ಕೆ.ಸಿ.ವೇಣುಗೋಪಾಲ್​, ಜಮೀರ್​​ ಅಹಮ್ಮದ್​​, ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಸೇರಿದಂತೆ ಎಚ್​​ಡಿ ಕುಮಾರಸ್ವಾಮಿಯವರು ಜಾಫರ್​​ ಷರೀಫರಿಗೆ ಸಂತಾಪ ಸೂಚಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಇಂದು ಕಾಂಗ್ರೆಸ್​​ ರಾಷ್ಟ್ರೀಯ ಅಧ್ಯಕ್ಷ ರಾಹುಲ್​​ ಗಾಂಧಿ,ಸೋನಿಯಾ ಗಾಂಧಿ ಅವರು ಅಂತಿಮ ನಮನ ಸಲ್ಲಿಸಲು ಆಗಮಿಸುವ ನಿರೀಕ್ಷೆಯಿದೆ.

ರಾಜಕೀಯದ ಅವಧಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಆಪ್ತರಾಗಿದ್ದ ಜಾಫರ್ ಷರೀಫ್, ಪಿವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದಾರೆ. ಷರೀಫ್ ಅವರ ಅಂತಿಮ ದರ್ಶನಕ್ಕೆ ಶಿವಾಜಿನಗರದ ಸ್ವಗೃಹದಲ್ಲಿ ಅವಕಾಶ ನೀಡಲಾಗಿದೆ. ಇಂದು ಇಸ್ಲಾಂ ಧರ್ಮದ ಪ್ರಕಾರ ವಿಧಿವಿಧಾನ ನಡೆಸಿ ಬಳಿಕ ಮಧ್ಯಾಹ್ನ 1.30ಕ್ಕೆ ಈದ್ಗಾ ಖುದ್ದೂಸ್‌ನಲ್ಲಿ ಅಂತ್ಯಕ್ರಿಯೆ  ನಡೆಯಲಿದೆ.

ಗುಲಾಂ ನಭಿ ಅಜಾದ್ಸಂತಾಪ:
ಕೇಂದ್ರ ಮಾಜಿ ಸಚಿವ ಜಾಫರ್​ ಶರೀಫ್​ ಅಂತಿಮ ದರ್ಶನ ಪಡೆಯಲು ಗುಲಾಂ ನಬಿ ಅಜಾದ್​ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.  ರೆಬಲ್​ ಸ್ಟಾರ್​ ಅಂಬರೀಶ್​ ಮತ್ತು ಜಾಫರ್​ ಶರೀಫ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್​ ಪಕ್ಷ ಇಬ್ಬರು ಮುತ್ಸದ್ದಿ ರಾಜಕಾರಣಿಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್​ ಪಕ್ಷಕ್ಕೆ ಇದು ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ