ಪಂಚಭೂತಗಳಲ್ಲಿ ಲೀನವಾದ ಅಂಬರೀಶ್

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಿಯುಗದ ಕರ್ಣ, ರೆಬಲ್ ಸ್ಟಾರ್ ಅಂಬರೀಷ್ ಅಂತ್ಯಕ್ರಿಯೆ ನಡೆಯಿತು. ಅಂಬರೀಷ್ ಅವರ ಪುತ್ರ ಅಭಿಷೇಕ್ ಗೌಡ ಅವರು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಅಂಬಿಗೆ ಕಣ್ಣೀರ ವಿದಾಯ ಹೇಳಿದರು.

ಶ್ರೀರಂಗಪಟ್ಟಣದ ವೈದಿಕ ಪಂಡಿತ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದ ತಂಡ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ವಿಧಿ ವಿಧಾನಗಳನ್ನು ನೆರವೇರಿಸಿತು.

ಇದಕ್ಕು ಮುನ್ನ ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗಡ, ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ, ಹಿರಿಯ ನಟಿಯರಾದ ಬಿ.ಸರೋಜಾದೇವಿ, ಜಯಂತಿ, ನಟರಾದ ಶಿವರಾಜ್ ಕುಮಾರ್,ಪುನೀತ್ ರಾಜ್ ಕುಮಾರ್, ಯಶ್, ದರ್ಶನ್, ರವಿಚಂದ್ರನ್, ರಾಕ್ ಲೈನ್ ವೆಂಕಟೇಶ್, ತೆಲುಗು ನಟರಾದ ಚಿರಂಜೀವಿ, ಮೋಹನ್ ಬಾಬು ಮತ್ತು ಕುಟುಂಬಸ್ಥರು ಸೇರಿದಂತೆ ಹಲವು ಗಣ್ಯರು ಅಂಬಿಗೆ ಅಂತಿಮ ನಮನ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ