ಕಂಠೀರವ ಸ್ಟುಡಿಯೋದಲ್ಲಿ ಇಂದು ಅಂಬಿ ಅಂತ್ಯಕ್ರಿಯೆ: ಸರ್ಕಾರದಿಂದ ಸಕಲ ಸಿದ್ಧತೆ

ಬೆಂಗಳೂರುಕಾಂಗ್ರೆಸ್​​ನ ಹಿರಿಯ ನಾಯಕ, ನಟ ರೆಬೆಲ್​​ ಸ್ಟಾರ್​​ ಅಂಬರೀಶ್​​ ಅವರ ಅಂತಿಮ ದರ್ಶನ ಪಡೆಯಲು ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಅಭಿಮಾನಿಗಳ ಸಖ್ಯೆ ಇನ್ನೂ ಕಡಿಮೆಯಾಗಿಲ್ಲ. ಆದರೆ, ಮಧ್ಯಾಹ್ನ ಅಂಬರೀಶ್​​ ಅವರ ಅಂತ್ಯಕ್ರಿಯೆ ನಡೆಸಬೇಕಾದ ಹಿನ್ನೆಲೆಯಲ್ಲಿ ಸಿಎಂ ಎಚ್​ಡಿ ಕುಮಾರಸ್ವಾಮಿಯವರು ಮಂಡ್ಯಕ್ಕೆ ಆಗಮಿಸಿದ ಕೂಡಲೇ ಪಾರ್ಥಿವ ಶರೀರವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲು ತಯಾರಿ ನಡೆಸಲಾಗಿದೆ.
ಅಂಬರೀಶ್​​ ಅವರ ಪಾರ್ಥಿವ ಶರೀರ ಮಡ್ಯದಿಂದ ವಿಶೇಷ ಹೆಲಿಕ್ಯಾಪ್ಟರ್​ನಲ್ಲಿ ಬೆಂಗಳೂರಿಗೆ ಸುಮಾರು ಬಳಿಗ್ಗೆ 10.30 ಕ್ಕೆ ತಲುಪಲಿದೆ. ಬಳಿಕ ಎಚ್​​ಎಎಲ್​ನಿಂದ ಮೆರವಣಿಗೆ ಮೂಲಕ ಅಂಬಿ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ತರಲಾಗುವುದು. ಕಂಠೀರವ ಕ್ರೀಡಾಂಗಣದಿಂದ ಅಂಬಿ ಪಾರ್ಥಿವ ಶರೀರರದ ಮೆರವಣಿಗೆ ಹಡ್ಸನ್ ವೃತ್ತ, ಹಲಸೂರು ಗೇಟ್ ಠಾಣೆ, ಕೆಜಿ ರಸ್ತೆ ಮೈಸುರು ಬ್ಯಾಂಕ್ ಸರ್ಕಲ್ ಸಿಐಡಿ ಜಂಕ್ಷನ್, ಬಸವೇಶ್ವರ ಸರ್ಕಲ್, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಸ್ಯಾಂಕಿ ರೋಡ್, ಮಾರಮ್ಮ ಸರ್ಕಲ್, ಯಶವಂತಪುರ ಮೇಲ್ಸುತುವೆ, ಗೊರಗುಂಟೆಪಾಳ್ಯ ಜಂಕ್ಷನ್, ಎಸ್​​ಟಿಐ ಮೂಲಕ ಕಂಠೀರವ ಸ್ಟುಡಿಯೋಗೆ ಬರಲಿದೆ ಎನ್ನಲಾಗಿದೆ.

ನಟ ರಾಜ್​​ ಕುಮಾರ ಅವರ ಸಮಾಧಿ ಪಕ್ಕದಲೇ ಇರುವ ಜಾಗದಲ್ಲಿ ಅಂಬರೀಶ್​​ ಚಿರನಿದ್ರೆಗೆ ಜಾರಲಿದ್ದಾರೆ. ಹೀಗಾಗಿ ಅವರ ಅಂತ್ಯಕ್ರಿಯೆಗೆ ಸರ್ಕಾರದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಸುಮಾರು ಮಧ್ಯಾಹ್ನ 1 ರಿಂದ 2 ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ. ಸಂಸ್ಕಾರಕ್ಕೆ ಮೂರುವರೆ ಅಡಿ ಎತ್ತರದ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಒಕ್ಕಲಿಗರ ಸಂಪ್ರದಾಯದಂತೆ ಅಂಬಿ ಪುತ್ರ ಅಭಿಷೇಕ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಅಂತ್ಯಕ್ರಿಯೆ ಉಸ್ತುವಾರಿ: ಅಂತ್ಯಕ್ರಿಯೆಯ ಉಸ್ತುವಾರಿಯನ್ನು ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಗೋಪಾಲಯ್ಯ, ಬಿಬಿಎಂಪಿ ವಹಿಸಿಕೊಂಡಿದೆ. ಖ್ಯಾತ ವೈದಿಕ ಡಾ. ಭಾನುಪ್ರಕಾಶ್ ಶಿಷ್ಯರ ತಂಡದಿಂದಲೇ ಅಂತಿಮ ವಿಧಿವಿಧಾನ ನೆರವೇರಲಿದೆ. ಭಾನುಪ್ರಕಾಶ್ ಅವರು ಅಮೆರಿಕದಲ್ಲಿರುವ ಕಾರಣದಿಂದ ಶಿಷ್ಯರಿಗೆ ಫೋನ್​​ನಲ್ಲಿಯೇ ಮಾರ್ಗದರ್ಶನ ನೀಡಲಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಅಂಬಿ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗಲಿದೆ. ಇನ್ನೊಂದೆಡೆ ಇಡೀ ರಾಜ್ಯವೇ ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದೆ.

ಅಂತ್ಯ ಸಂಸ್ಕಾರಕ್ಕಾಗಿಯೇ ನೀಲಗಿರಿ, ಅತ್ತಿ, ಸಾಮೆ, ಗಂಧದ ಕಡ್ಡಿಗಳನ್ನ ತರಿಸಲಾಗಿದೆ. ಗಂಧದ ಚೆಕ್ಕೆ 13 ಕೆ.ಜಿ,  ಕೊಬ್ಬರಿ ಹತ್ತು ಕೆ.ಜಿ, ತುಪ್ಪ 30 ಕೆ.ಜಿ, ಕರ್ಪೂರ 5 ಕೆ.ಜಿ, ಹಸುವಿನ ಬೆರಣಿ ಒಂದು ಚೀಲ, ಹುಣಸೆ ಮರದ ಕೊಂಬೆಗಳು, ಅಂತ್ಯ ಸಂಸ್ಕಾರಕ್ಕೆ ಕಟ್ಟೆಯನ್ನ ಕಟ್ಟಿ ಬಿಳಿ ಬಣ್ಣ ಬಳಿಯಲಾಗಿದೆ. ಈಗಾಗಲೇ ಸಮಾಧಿ ನಿರ್ಮಾಣದ ಜಾಗವನ್ನು ಸರ್ಕಾರಿ ಸಿಬ್ಬಂದಿ ಸ್ವಚ್ಛತೆ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.

ಅಂಬರೀಶ್​​ ಅವರ ನಿಧನದ ಬಳಿಕ ಅಂತಿಮ ದರ್ಶನಕ್ಕೆಂದು ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರ ಇರಿಸಲಾಗಿತ್ತು. ನಂತರ ರೆಬೆಲ್​​ ಸ್ಟಾರ್​​ ಪಾರ್ಥಿವ ಶರೀರವನ್ನು ಅಭಿಮಾನಿಗಳ ಒತ್ತಾಯದ ಮೇರೆಗೆ ಮಂಡ್ಯಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮಧ್ಯಾಹ್ನ ವೇಳೆ ಅಂತ್ಯಕ್ರಿಯೆ ನಡೆಯಲಿದ್ದು, ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಸೇನಾ ಹೆಲಿಕಾಪ್ಟರ್ ಮೂಲಕ ತರಲಾಗುತ್ತಿದೆ.

ಬಿಗಿ ಬಂದೋಬಸ್ತ್:​​​ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರಿ ಬಿಗಿ ಪೊಲೀಸ್​​ ಬಂದೋಬಸ್ತ್ ಮಾಡಲಾಗಿದೆ. 11 ಸಾವಿರ ಪೊಲೀಸರು ಹಾಗೂ 4 ಸಾವಿರ ಸಂಚಾರಿ ಪೊಲೀಸರು, 30 ಕೆಎಸ್​​ಆರ್​ಪಿ ತುಕಡಿ, 34 ಸಿಆರ್ ತುಕಡಿ, 3 ಯಾರ್ಪಿಡ್ ಆಯಕ್ಷನ್ ಪೋರ್ಸ್, 5 ಆರ್​​ಐವಿ ಪಡೆ, 4 ಹೆಚ್ಚುವರಿ ಪೊಲೀಸ್ ಆಯುಕ್ತರು, 15 ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್​​ ಆಯುಕ್ತರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ