ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿ ಅಂಬರೀಷ್ ಅಂತ್ಯಕ್ರಿಯೆ

ಬೆಂಗಳೂರು, ನವೆಂಬರ್ 26- ಶನಿವಾರ ನಿಧನರಾದ ನಟ, ಮಾಜಿ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆಯು ಖುದ್ದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸುಗಮವಾಗಿ ನೆರವೇರಿತು.

ಅಭಿಮಾನಿಗಳ ಕೋರಿಕೆಯ ಮೇರೆಗೆ ನಿನ್ನೆ ಸಂಜೆ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ಮಂಡ್ಯಕ್ಕೆ ಒಯ್ದು ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಯ ಮಾಡಲಾಗಿತ್ತು. ಇಂದು ಬೆಳಿಗ್ಗೆ 9 ಗಂಟೆ ವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸುಮಾರು 9 ಗಂಟೆ ವೇಳೆಗೆ ಕ್ರೀಡಾಂಗಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕಳುಹಿಸಲು ವ್ಯವಸ್ಥೆ ಮಾಡಿದರು.

ನಂತರ ರಸ್ತೆ ಮೂಲಕ ನೇರವಾಗಿ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ, ಅಂಬರೀಷ್ ಅವರ ಅಂತಿಮ ಯಾತ್ರೆಗೆ ಚಾಲನೆ ನೀಡಿದರು.

ಆಮೇಲೆ ಮಿಲ್ಲರ್ಸ್ ರಸ್ತೆಯಲ್ಲಿ ನಿನ್ನೆ ನಿಧನರಾದ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಅಲ್ಲಿಂದ ನೇರವಾಗಿ ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಷ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

ಅಂತ್ಯಕ್ರಿಯೆಗೆ ಆಗಮಿಸಿದ ರಾಜಕೀಯ ಧುರೀಣರು ಹಾಗೂ ಚಿತ್ರರಂಗದ ಗಣ್ಯರನ್ನು ಖುದ್ದು ಬರಮಾಡಿಕೊಂದು ಮಾತನಾಡಿಸಿದರು.
ಅಂತ್ಯಕ್ರಿಯೆ ಪೂರ್ಣಗೊಳ್ಳುವ ವರೆಗೂ ಸ್ಥಳದಲ್ಲಿಯೇ ಇದ್ದು ಕುಟುಂಬದವರಿಗೆ ರಾಷ್ಟ್ರಧ್ವಜವನ್ನು ಹಸ್ತಾನ್ತರಿಸಿದರು.
ಮುಖ್ಯಮಂತ್ರಿಗಳು ಸ್ವತಃ ಮಂಡ್ಯ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಹಾಗೂ ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತರು ಮತ್ತಿತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾರ್ಗದರ್ಶನ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ