ಭಾವಪೂರ್ಣ ಶ್ರದ್ಧಾಂಜಲಿಗೆ ಸಾಕ್ಷಿಯಾದ ಅಂಬರೀಶ್ ಅಂತಿಮಯಾತ್ರೆ

ಬೆಂಗಳೂರು, ನ.26- ರೆಬಲ್‍ಸ್ಟಾರ್ ಅಂಬರೀಶ್ ಅವರ ಅಂತಿಮಯಾತ್ರೆಯನ್ನು ರಸ್ತೆಯ ಇಕ್ಕೆಲೆಗಳಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಮಂದಿ ಕಣ್ತುಂಬಿಕೊಂಡರು.
ಕಂಠೀರವ ಸ್ಟೇಡಿಯಂನಿಂದ ಆರಂಭವಾದ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಅಲ್ಲಿಂದ ಮೈಸೂರ್ ಬ್ಯಾಂಕ್ ವೃತ್ತದವರೆಗೂ ಕೆ.ಜಿ.ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಸಾವಿರಾರು ಮಂದಿ ತಮ್ಮ ನೆಚ್ಚಿನ ನಟ ಹಾಗೂ ನಾಯಕನಿಗೆ ಕೈಮುಗಿದು ಭಾವಪೂರ್ಣ ವಿದಾಯ ಹೇಳಿದರು.
ಮೈಸೂರ್‍ಬ್ಯಾಂಕ್ ವೃತ್ತದಲ್ಲಿ ಜನಜಂಗುಳಿ ಸೇರಿತ್ತು. ಅಲ್ಲಿಂದ ಸಿಐಡಿ ಜಂಕ್ಷನ್ ಬಳಿಯೂ ಜನ ನೆರೆದಿತ್ತು. ವಿಂಡ್ಸನ್ ಮ್ಯಾನರ್ ಬಳಿ ಪೆÇಲೀಸರು ಪ್ರವೇಶ ನಿರ್ಬಂಧಿಸಿದ್ದರೂ ಜನ ಬಲವಂತವಾಗಿ ನುಗ್ಗಿ ಸೇತುವೆ ಮೇಲೆ ನಿಂತು ಅಂತಿಮ ಯಾತ್ರೆಯ ದರ್ಶನ ಪಡೆದರು.

ಕಾವೇರಿ ಜಂಕ್ಷನ್‍ನಿಂದ ಸದಾಶಿವನಗರದ ಸ್ಯಾಂಕಿಕೆರೆಯ ಆರಂಭದವರೆಗೂ ಜನ ಸಾಲುಗಟ್ಟಿ ನಿಂತಿದ್ದರು. ಮಲ್ಲೇಶ್ವರಂನ ಪಿಯು ಬೋರ್ಡ್ ಜಂಕ್ಷನ್, ಸರ್ಕಲ್ ಮಾರಮ್ಮ ವೃತ್ತದ ಬಳಿ ಜನ ಕಿಕ್ಕಿರಿದು ತುಂಬಿದ್ದರು.

ಅಲ್ಲಿಂದ ಸಿಎನ್‍ಆರ್ ವೃತ್ತ, ಯಶವಂತಪುರ ಮೆಟ್ರೋ ಸ್ಟೇಷನ್‍ವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದರಲ್ಲದೆ, ಅಂಬಿ ದರ್ಶನಕ್ಕಾಗಿ ಯಶವಂತಪುರದ ಬಳಿ ಜನ ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಕಾದು ನಿಂತಿದ್ದು ವಿಶೇಷವಾಗಿತ್ತು. ಮೆರವಣಿಗೆಯ ವಾಹನಕ್ಕೆ ಸಾರ್ವಜನಿಕರು ಅಡ್ಡಬರಬಾರದು ಎಂಬ ಕಾರಣಕ್ಕಾಗಿ ಪೆÇಲೀಸರು ವ್ಯಾಪಕ ಬಿಗಿ ಬಂದೋಬಸ್ತ್ ಆಯೋಜಿಸಿದ್ದರು.

ರಕ್ಷಾ ಕವಚಗಳನ್ನು ತೊಟ್ಟು ಭದ್ರತೆ ಒದಗಿಸಿದ್ದರು. ಪೆÇಲೀಸರು ಎಷ್ಟೇ ನಿಯಂತ್ರಿಸಿದರೂ ಹಗ್ಗವನ್ನು ದಾಟಿ ಜನ ಅಂಬಿಯವರ ಮೆರವಣಿಗೆಯ ವಾಹನವನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿದ್ದರು.

ಅಂತಿಮ ಯಾತ್ರೆಯ ಮೆರವಣಿಗೆ ತುಮಕೂರು ರಸ್ತೆಗೆ ಬರುವಾಗ ಸರಿಸುಮಾರು 1.45ನಿಮಿಷಗಳಾಗಿತ್ತು. ಬೆಳಗ್ಗೆ 11 ಗಂಟೆಯಿಂದಲೂ ರಸ್ತೆ ಮಧ್ಯೆ ನಿಂತಿದ್ದ ಜನ ಅಂತಿಮ ಯಾತ್ರೆ ಸಾಗಿ ಹೋಗುವವರೆಗೂ ಬಿಸಿಲಿನಲ್ಲೇ ಕಾದು ನಿಂತಿದ್ದರು. ಬಹಳಷ್ಟು ಮಂದಿ ಮೆರವಣಿಗೆಯ ಹಿಂದೆಯೇ ಹೆಜ್ಜೆ ಹಾಕಿದ್ದರಿಂದ ಹಾದಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಬಂದಿದ್ದರು.

ಇತಿಹಾಸದ ಅಪರೂಪದ ಘಟನೆಗಳಲ್ಲಿ ಒಂದಾ ಅಂಬಿಯವರ ಅಂತಿಮ ಯಾತ್ರೆ ದುಃಖ ಮಿಶ್ರಿತ ಭಾವಪೂರ್ಣ ಶ್ರದ್ಧಾಂಜಲಿಗೆ ಸಾಕ್ಷಿಯಾಯಿತು. ಮಹಿಳೆಯರು, ಮಕ್ಕಳು, ವಯೋವೃದ್ಧರು ಎನ್ನದೆ, ಎಲ್ಲ ವರ್ಗ, ಜಾತಿಯ ಜನರು ಅಂಬಿ ಅವರ ಅಂತಿಮ ದರ್ಶನಕ್ಕಾಗಿ ರಸ್ತೆ ಬದಿ ಸಾಲುಗಟ್ಟಿ ನಿಂತಿದ್ದರು.

ನಿನ್ನೆ ಬೆಳಗ್ಗೆಯಿಂದ ಬೆಂಗಳೂರಿನಲ್ಲಿ ಲಕ್ಷಾಂತರ ಜನ, ನಿನ್ನೆ ಸಂಜೆಯಿಂದ ಮಂಡ್ಯಾದಲ್ಲಿ ಸುಮಾರು ಎರಡೂವರೆ ಲಕ್ಷ ಜನ ಅಂಬಿ ಅವರ ಅಂತಿಮ ದರ್ಶನ ಪಡೆದಿದ್ದರು. ಇಂದು ಅಂತಿಮ ದರ್ಶನದಲ್ಲೂ ಅಷ್ಟೇ ಜನ ಕಾದು ನಿಂತದ್ದು ರೆಬಲ್‍ಸ್ಟಾರ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ತುಮಕೂರು ರಸ್ತೆಯಿಂದ ಕಂಠೀರವ ಸ್ಟುಡಿಯೋವರೆಗಿನ ಹೊರವರ್ತುಲ ರಸ್ತೆ ಯುದ್ದಕ್ಕೂ ಜನ ಊಟ, ತಿಂಡಿ ಬಿಟ್ಟು ಬಿಸಿಲಿನಲ್ಲೇ ನಿಂತು ಅಂಬರೀಶ್ ಅವರ ದರ್ಶನ ಪಡೆದರು. ಹಾದಿಯುದ್ದಕ್ಕೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಿಂತಲೂ ಅಂಬಿ ಅಭಿಮಾನಿಗಳೇ ತುಂಬಿದ್ದರು.

ಮುಂಜಾಗ್ರತಾ ಕ್ರಮವಾಗಿ ಪೆÇಲೀಸರು ಎಲ್ಲಿಯೂ ವಾಹನಗಳನ್ನು ನಿಲ್ಲಲು ಬಿಡದೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರು. ಸಂಚಾರದ ಮಾರ್ಗ ಬದಲಿಸಿ ಅಂಬಿ ಅಂತಿಮ ಯಾತ್ರೆಗಾಗಿ ಅವಕಾಶ ಮಾಡಿಕೊಡಲಾಗಿತ್ತು.

ಕಂಠೀರವ ಸ್ಟುಡಿಯೋ ಬಳಿ ಸಾವಿರಾರು ಜನ ಜಮಾಯಿಸಿದ್ದರಲ್ಲದೆ, ಅಂಬಿ ಅವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಅದಕ್ಕಿಂತಲೂ ದುಪ್ಪಟ್ಟು ಸಂಖ್ಯೆಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ, ಕ್ಟಟಡಗಳ ಮೇಲ್ಬಾಗದಲ್ಲಿ ಜನ ನಿಂತು ಗಂಟೆಗಟ್ಟಲೆ ಕಾದಿದ್ದರು.

ಅಂಬಿ ಅವರ ನಿಧನದ ಹಿನ್ನೆಲೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದವು. ಕಂಠೀರವ ಸ್ಟುಡಿಯೋದ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲೂ ನಿಲುಗಡೆಗೆ ಸ್ಥಳಾವಕಾಶವಿಲ್ಲದಷ್ಟು ವಾಹನಗಳು ಕಿಕ್ಕಿರಿದಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ