ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯ ಜಿಲ್ಲೆಯಲ್ಲಿ ದರ್ಶನಕ್ಕಿಡಿ: ಅಭಿಮಾನಿಗಳಿಂದ ಮುಂದುವರಿದ ಪ್ರತಿಭಟನೆ

ಮಂಡ್ಯ: ಕನ್ನಡ ಚಿತ್ರರಂಗದ ದಿಗ್ಗಜ, ರೆಬೆಲ್‌ ಸ್ಟಾರ್‌, ಮಾಜಿ ಸಚಿವ ಅಂಬರೀಶ್ (66) ಶನಿವಾರ ರಾತ್ರಿ ವಿಧಿವಶರಾಗಿದ್ದಾರೆ. ಈ ಹಿನ್ನೆಲೆ ಮಂಡ್ಯದ ಗಂಡು ಹಾಗೂ ತಮ್ಮ ನೆಚ್ಚಿನ ಅಂಬರೀಶಣ್ಣನ ಪಾರ್ಥಿವ ಶರೀರವನ್ನು ಕನಿಷ್ಠ 2 ಗಂಟೆಗಳ ಸಮಯವಾದರೂ ಮಂಡ್ಯದಲ್ಲಿಡಿ ಎಂದು ಅವರ ಅಭಿಮಾನಿಗಳು ರಾತ್ರಿಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ.
ತೀವ್ರ ಉಸಿರಾಟದ ತೊಂದರೆಯಿಂದ ಅವರನ್ನು ಶನಿವಾರ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 10. 15 ಗಂಟೆಗೆ ಅಂಬರೀಶ್‌ ಮೃತಪಟ್ಟಿದ್ದಾರೆ. ಈ ಆಘಾತಕಾರಿ ಸುದ್ದಿಯನ್ನು ತಿಳಿದ ಮಂಡ್ಯ ಜಿಲ್ಲೆಯ ಜನತೆ ಅಂಬರೀಶ್ ಅಂತ್ಯಕ್ರಿಯೆಯನ್ನು ಮಂಡ್ಯದಲ್ಲೇ ಮಾಡಿ ಎಂದು ಆಗ್ರಹಿಸಿದರು. ಇದು ಸಾಧ್ಯವಾಗದಿದ್ದಲ್ಲಿ ಕನಿಷ್ಠ 2 ಗಂಟೆಗಳ ಕಾಲವಾದರೂ ಅಂಬರೀಶಣ್ಣನ ಪಾರ್ಥಿವ ಶರೀರವನ್ನು ಮಂಡ್ಯದಲ್ಲಿ ದರ್ಶನಕ್ಕಿಡಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯ ನಗರದ ಪ್ರಮುಖ ಭಾಗವಾದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಆದರೆ, ಈ ರೀತಿ ಮಾಡುವುದು ಕಷ್ಟಸಾಧ್ಯವಾಗಿದ್ದು, ಇಂದು ಇಡೀ ದಿನ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮಂಡ್ಯ ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರಿಂದ ಅಂಬರೀಷ್‌ ಅಂತಿಮ ದರ್ಶನಕ್ಕೆ ಅನುಕೂಲವಾಗಲೆಂದು ಹೆಚ್ಚುವರಿ ಬಸ್‌ ಸೇವೆ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.
ಮಂಡ್ಯದ ಗಂಡು ಅಂಬರೀಶ್ ನಿಧನದಿಂದ ಮಂಡ್ಯ ಜಿಲ್ಲೆಯಲ್ಲಿ ದುಃಖ ಮಡುಗಟ್ಟಿದೆ. ಮಂಡ್ಯದಲ್ಲಿ ಶನಿವಾರ ಬೆಳಗ್ಗೆ ಬಸ್‌ ದುರಂತ ಘಟನೆ ಮಾಸುವ ಬೆನ್ನಲ್ಲೇ ಅಂಬರೀಶ್‌ ನಿಧನ ಮಂಡ್ಯ ಜನತೆಗೆ ಮತ್ತೊಂದು ಶಾಕ್‌ ಕೊಟ್ಟಿದೆ. ನಟನಾಗಿ, ರಾಜಕಾರಣಿಯಾಗಿ, ಕೊಡುಗೈ ದಾನಿಯಾಗಿ, ಜನಾನುರಾಗಿಯಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದ ಕಲಿಯುಗದ ಕರ್ಣನಾಗಿದ್ದ ಅಂಬರೀಷ್‌ ಕೊನೆಯುಸಿರೆಳೆದಿರುವುದು ಕೋಟ್ಯಂತರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಇನ್ನು, ಅಂಬರೀಶ್ ಅಂತ್ಯಕ್ರಿಯೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಜರುಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ ಸ್ಮಾರಕದ ಬಳಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬ ಸದಸ್ಯರ ಜತೆ ಚರ್ಚಿಸಿ, ಸಲಹೆ ಸೂಚನೆ ಪಡೆದು ಕ್ರಮ ಕೈಗೊಳ್ಳಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ