ಬೆಂಗಳೂರು: ಮಂಡ್ಯದ ಗಂಡು ಎಂದೇ ಖ್ಯಾತಿ ಗಳಿಸಿದ್ದ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಚಿತ್ರರಂಗ ಪ್ರವೇಶಿಸಿದ ಬಳಿಕ ಅಂಬರೀಶ್ ಹೆಸರಿನಿಂದ ಪ್ರಸಿದ್ಧರಾದರು. 1952ರ ಮೇ 29ರಂದು ಜನಿಸಿದ ಅಂಬರೀಶ್ ಬಾಲ್ಯದ ವಿದ್ಯಾಭ್ಯಾಸವನ್ನು ಮಂಡ್ಯದಲ್ಲೇ ಪೂರೈಸಿದರು.
ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿ ಮಗನಾಗಿದ್ದ ಅಂಬರೀಶ್ 1991ರಲ್ಲಿ ನಟಿ ಸುಮಲತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಸಿರಿದರು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ 1972ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅಂಬರೀಶ್, ಖಳನಾಯಕನ ಪಾತ್ರದಲ್ಲಿ ಚಿತ್ರರಸಿಕರ ಮನ ಗೆದ್ದಿದ್ದರು. ನಟ ವಿಷ್ಣುವರ್ಧನ್ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬರೀಶ್, ಚಿತ್ರರಂಗದಲ್ಲಿ ಕುಚ್ಚಿಕ್ಕೂ ಗೆಳೆಯರೆಂದೇ ಪ್ರಸಿದ್ಧರು.
ವಿಷ್ಣು ಸಾವಿನ ಬಳಿಕ ಅಂಬರೀಶ್ ಸ್ವಲ್ಪ ಕಾಲ ಒಂಟಿಯಾಗಿದ್ದರೂ, ನಂತರ ಚಿತ್ರರಂಗದ ಜತೆಗೆ ರಾಜಕೀಯದಲ್ಲೂ ಕೈಯಾಡಿಸಿದರು. ಬೆಂಗಳೂರು ರೇಸ್ ಕೋರ್ಸ್ ಕ್ಲಬ್ಗೆ ನಿಯತವಾಗಿ ಭೇಟಿ ನೀಡುತ್ತಿದ್ದ ಅಂಬರೀಶ್, ಕುದುರೆ ರೇಸ್ ಕುರಿತು ತೀವ್ರ ಆಸಕ್ತಿ ಹೊಂದಿದ್ದರು.
ರೆಬೆಲ್ ಸ್ಟಾರ್ ಬಿರುದಿನ ಜತೆಗೆ ಕಾಂಗ್ರೆಸ್ ಪಕ್ಷದ ಮೂಲಕ ಸಂಸದರಾಗಿ, ರಾಜ್ಯ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಪಡುವಾರಳ್ಳಿ ಪಾಂಡವರು, ಮಸಣದ ಹೂವು, ಶುಭಮಂಗಳ, ರಂಗನಾಯಕಿ, ಅಂತ ಇವು ಅಂಬರೀಶ್ ಅವರನ್ನು ನೆನಪಿಸುವ ಕನ್ನಡದ ಕೆಲವು ಪ್ರಸಿದ್ಧ ಚಿತ್ರಗಳು.
ಚಿತ್ರರಂಗದಲ್ಲಿ ಹಿರಿಯರಾಗಿದ್ದ ಅಂಬರೀಶ್, ಕ್ರಿಕೆಟ್ ಕುರಿತು ಕೂಡ ಒಲವು ಹೊಂದಿದ್ದು, ಕಳೆದ ಸೆಪ್ಟೆಂಬರ್ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು.
ರಾಜಕೀಯ ರಂಗ ಪ್ರವೇಶಿಸಿದ ಮೇಲೆ ಸಿನಿಮಾದತ್ತ ಒಲವು ಕಡಿಮೆಯಾಗಿದ್ದರೂ, ಚಿತ್ರರಂಗದ ಕಾರ್ಯಕ್ರಮಕ್ಕೆ ಅಂಬಿ ಸದಾ ಹಾಜರಾಗುತ್ತಿದ್ದರು. ಅವರ ಕುದುರೆ ರೇಸ್ ಹುಚ್ಚು ಹಲವು ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಕೆಲವೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೂ ಅಂಬಿ ರೆಬೆಲ್ಸ್ಟಾರ್ ಎಂಬ ಪಟ್ಟ ಉಳಿಸಿಕೊಂಡಿದ್ದರು. ಅದರ ಜತೆಗೆ ಗಾಲ್ಫ್ ಆಟದ ಶೋಕಿಯೂ ಅಂಬಿಗೆ ಇತ್ತು.