ಬೆಂಗಳೂರು: ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕರೆತರಲು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಏರ್ಲಿಫ್ಟ್ ಮಾಡಲು ಕೇಂದ್ರ ರಕ್ಷಣಾ ಸಚಿವೆ ಜತೆ ಸಿಎಂ ಕುಮಾರಸ್ವಾಮಿ ಮಾತನಾಡಿದ್ದಾರೆ. ಸದ್ಯ, ಏರ್ಲಿಫ್ಟ್ಗೆ ರಕ್ಷಣಾ ಇಲಾಖೆ ಅನುಮತಿ ನೀಡಿದ್ದು, ಸಂಜೆ ಬಳಿಕ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ಏರ್ಲಿಫ್ಟ್ ಮಾಡಲಾಗುತ್ತದೆ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಂರೀಶ್ ರಾತ್ರಿ 10. 15 ಕ್ಕೆ ಮೃತಪಟ್ಟಿದ್ದರು. ಈ ಆಘಾತಕಾರಿ ಸುದ್ದಿಯನ್ನು ತಿಳಿದ ಮಂಡ್ಯ ಜಿಲ್ಲೆಯ ಜನತೆ ಅಂಬರೀಶ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಲ್ಲೇ ಮಾಡಿ ಎಂದು ಆಗ್ರಹಿಸಿದ್ದರು. ಇದು ಸಾಧ್ಯವಾಗದಿದ್ದಲ್ಲಿ ಕನಿಷ್ಠ 2 ಗಂಟೆಗಳ ಕಾಲವಾದರೂ ಅಂಬರೀಶಣ್ಣನ ಪಾರ್ಥಿವ ಶರೀರವನ್ನು ಮಂಡ್ಯದಲ್ಲಿ ದರ್ಶನಕ್ಕಿಡಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಒತ್ತಾಯಿಸಿ ಮಂಡ್ಯದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಈ ಹಿನ್ನೆಲೆ ಮಂಡ್ಯದ ಅಭಿಮಾನಿಗಳ ಹಾಗೂ ಜನತೆಯ ಪ್ರತಿಭಟನೆಗೆ ಮಣಿದ ಸಿಎಂ ಕುಮಾರಸ್ವಾಮಿ, ಅಂಬರೀಶ್ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ನಲ್ಲಿ ಏರ್ಲಿಫ್ಟ್ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕ, ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಸಲು ಮಾತುಕತೆ ನಡೆಸಲಾಗಿದೆ.
ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎನ್ನಲಾಗಿದೆ.
sandalwood actor ambareesh, dead body,airlifted to mandya