ಬೆಂಗಳೂರು:ರೆಬೆಲ್ ಸ್ಟಾರ್ ಅಂಬರೀಶ್ ಎಂದೂ ಬತ್ತದ ಉತ್ಸಾಹದ ಚಿಲುಮೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಈಗ ಅಂಬಿ ನಿಂಗೆ ವಯಸ್ಸಾಯ್ತೋ ಎನ್ನುವ ವಿಶಿಷ್ಟ ಶಿರ್ಷಿಕೆಯ ಮೂಲಕ ತನಗೆ ವಯಸ್ಸಾಗಿದ್ದನ್ನೂ ಖುಷಿಯಿಂದ ಹೇಳಿಕೊಂಡಿದ್ದಾರೆ ಮಂಡ್ಯದ ಗಂಡು.
ಅಂಬಿ ನೆಚ್ಚಿನ ಅಭಿಮಾನಿಗಳಿಗೆ ಸುಂದರವಾದ ಪತ್ರವೊಂದನ್ನು ಬರೆದಿದ್ದರು. ಅಮರನಾಥ್ ಆಗಿ ಹುಟ್ಟಿದ ತಾನು ಅದ್ಹೇಗೆ ಅಂಬರೀಶ್ ಆದೆ..ಪುಟ್ಟಣ್ಣ ಕಣಗಾಲ್ ರಂತಹ ಶಿಲ್ಪಿಯ ಕೈಗೆ ಜಲೀಲನಾಗಿ ಸಿಕ್ಕು ಅದ್ಹೇಗೆ ದಶಕಗಳಲ್ಲಿ ಚಿತ್ರರಂಗವನ್ನು ತನ್ನ ಬದುಕಾಗಿಸಿಕೊಂಡೆ ಎನ್ನುವುದನ್ನು ಬಹಳ ಅದ್ಭುತವಾಗಿ ಪದಗಳ ಮೂಲಕ ಈ ಪತ್ರದಲ್ಲಿ ವಿವರಿಸಿ ಗಮನ ಸೆಳೆದಿದ್ದರು.
ತಮ್ಮ ಇಷ್ಟು ವರ್ಷಗಳ ನಟನೆಯ ಬದುಕು, ಸುಖಿ ಸಂಸಾರ, ರಾಜಕೀಯ, ನಂತರದ ಅನಾರೋಗ್ಯ ಇವೆಲ್ಲದರ ನಡುವೆಯೂ ತನ್ನ ವಯಸ್ಸಿಗೆ ತಕ್ಕಂತ ಪ್ರಬುದ್ಧ ಪಾತ್ರಗಳನ್ನು ಮಾಡಲು ಮನಸ್ಸು ಹಾತೊರೆಯುತ್ತಿತ್ತಂತೆ.ಇಂಥಾ ಸಂದರ್ಭದಲ್ಲಿ ಸಿಕ್ಕ ಮಗನಂಥಾ ನಟ ಸುದೀಪ್ ಜೊತೆಗೆ ವಿಭಿನ್ನ ಚಿತ್ರ ಕೊಡುವ ಪ್ರಯತ್ನವೇ ಅಂಬಿ ನಿಂಗ್ ವಯಸ್ಸಾಯ್ತೋ ಎಂದಿದ್ದಾರೆ ಈ ಕಲಿಯುಗದ ಕರ್ಣ.
ಇಡೀ ಕುಟುಂಬವೇ ಕುಳಿತು ನೋಡಬಹುದಾದ ಈ ಚಿತ್ರಕ್ಕೆ ಪ್ರೇಕ್ಷಕರ ಹಾರೈಕೆ ಇರಲಿ ಎನ್ನುವುದು ಅಂಬರೀಶ್ ಅಪೇಕ್ಷೆಯಾಗಿತ್ತು.
ಅಂದಹಾಗೆ ಆ ಲೆಟರ್? ಹೀಗಿತ್ತು….
ಹುಟ್ಟಿದ್ದು ಮಂಡ್ಯ, ಕುಡಿದಿದ್ದು ಕಾವೇರಿ.
ಹುಟ್ಟಿದಾಗ ಅಮರ್‍ನಾಥ್ ಆಗಿದ್ದ ನಾನು ಬೆಳಿತಾ ಬೆಳಿತಾ ನಿಮ್ಮ ಅಂಬರೀಷ್ ಆದೆ.ಪುಟ್ಟಣ್ಣನ ಜಲೀಲನ ಪಾತ್ರ ಮಾಡ್ತಾ ಮಾಡ್ತಾ ನನಗೇ ಗೊತ್ತಿಲ್ಲದೆ ನನ್ನೊಳಗೆ ಒಬ್ಬ ಪರಿಪೂರ್ಣ ಕಲಾವಿದ ಬೆಳಿತಾ ಹೋದ. ಹಿಂದಿನ 45 ವರ್ಷಗಳ ಕಾಲ ನೀವು ನನ್ನ ಮೇಲಿಟ್ಟ ಪ್ರೀತಿ, ಅಭಿಮಾನದಿಂದ ನೀವು ನನಗೆ ಕೊಟ್ಟ ಬಿರುದು ರೆಬೆಲ್ ಸ್ಟಾರ್
ಇಷ್ಟಪಟ್ಟ ಹುಡುಗಿ ಜೊತೆ ಮುಂದೆ ಮದುವೆ ಆಯ್ತು.ಮುದ್ದಾದ ಮಗ ಕೂಡ ಹುಟ್ಟಿದ.ಜೀವನ ನಿಧಾನವಾಗಿ ರಾಜಕೀಯದ ಕಡೆಗೆ ಹಾರಿತು.ಜನಸೇವೆಯನ್ನು ಮಾಡ್ತಾ ಬಂದೆ. ಸಿನಿಮಾ ನಟನೆಯನ್ನೇನು ಬಿಟ್ಟಿರಲಿಲ್ಲ. ಚಿತ್ರರಂಗದ ಆತ್ಮೀಯರು, ಹಿತೈಷಿಗಳು, ಸ್ನೇಹಿತರ ಒತ್ತಾಯಕ್ಕೆ, ಪ್ರೀತಿಗೆ ಸೋತು ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡ್ತಾ ಇದ್ದೆ.ಸಂತೋಷದ ಜೀವನ ಸಾಗ್ತಾ ಬಂತು.
ಯಾವಾಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದೆ, ಆಗ ನನ್ನೊಳಗಿನ ಕಲೆ ಹಾಗೇ ಇತ್ತು.ಮಾತನಾಡಲು ಶುರು ಮಾಡಿದೆ.ಆಗ ಹುಟ್ಟಿಕೊಂಡಿದ್ದೇ ಈ ಚಡಪಡಿಕೆ.ಒಳ್ಳೆ ಪಾತ್ರಗಳನ್ನ ಮಾಡುವ ಚಡಪಡಿಕೆ.ವಯಸ್ಸಿಗೊಪ್ಪುವ ಪರಿಪೂರ್ಣವಾದ ಪಾತ್ರಗಳನ್ನು ಮಾಡುವ ಚಡಪಡಿಕೆ.ಈ ಹಂತದಲ್ಲಿ ಜೊತೆಯಾದವನು ಮಗನಂತಹ ಗೆಳೆಯ ಸುದೀಪ. ಇನ್ನೇನು ಇಬ್ಬರೂ ಸೇರಿಕೊಂಡು ನಿಮ್ಮ ಇಡೀ ಕುಟುಂಬದ ಜೊತೆ ಕುಳಿತು ನೋಡುವ ಚಿತ್ರ ಮಾಡುವುದಕ್ಕಾಗಿ ನಿಶ್ಚಯ ಮಾಡಿದ್ದೀವಿ. ಇನ್ನೇನೂ ತಡ ಇಲ್ಲ, ಆದಷ್ಟೂ ಬೇಗ…
ಇಂತಿ ನಿಮ್ಮ ಪ್ರೀತಿಯ ಅಂಬರೀಷ.
ಹೀಗೆಂದು ಅಂಬಿ ಬರೆದಿದ್ದ ಪತ್ರ ಈಗ ಮನಕಲಕುವಂತಿದೆ….