ಬೆಂಗಳೂರು,ನ.25- ಅಭಿಮಾನಿಗಳ ಒತ್ತಾಸೆಯಂತೆ ಅಂಬರೀಶ್ ಅವರ ಪಾರ್ಥೀವ ಶರೀರವನ್ನು ತವರು ಜಿಲ್ಲೆ ಮಂಡ್ಯದಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ನಗರದ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಸಂಜೆ 4 ಗಂಟೆವರೆಗೆ ನಡೆದು ನಂತರ ಭಾರತೀಯ ವಾಯುಪಡೆಗೆ ಸೇರಿದ ವಿಶೇಷ ಹೆಲಿಕಾಪ್ಟರ್ನಲ್ಲಿ ಮಂಡ್ಯಕ್ಕೆ ಕೊಂಡೊಯ್ಯಲಾಯಿತು.
ಅಂಬರೀಶ್ ಅಭಿಮಾನಿಗಳ ಕೋರಿಕೆಯಂತೆ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 9 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 9 ಗಂಟೆಯ ನಂತರ ಪಾರ್ಥೀವ ಶರೀರವನ್ನು ಪುನಃ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ತಂದು ಬಳಿಕ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
ವರನಟ ಡಾ.ರಾಜ್ಕುಮಾರ್ ಅವರ ಸಮಾಧಿ ಎದುರಿನ ಬಲಭಾಗದಲ್ಲಿರುವ ಒಂದೂವರೆ ಎಕರೆ ಸರ್ಕಾರಿ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಇದಕ್ಕೂ ಮುನ್ನ ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಭದ್ರತಾ ದೃಷ್ಟಿಯಿಂದ ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹಿಂದೇಟು ಹಾಕಲಾಗಿತ್ತು. ಆದರೆ ಅವರ ಅಭಿಮಾನಿಗಳು ತವರು ಜಿಲ್ಲೆಗೆ ತರಲೇಬೇಕೆಂದು ಪಟ್ಟು ಹಿಡಿದರು.
ಅಂತಿಮವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಮನವರಿಕೆ ಮಾಡಿದರು. ಬಳಿಕ ರಕ್ಷಣಾ ಇಲಾಖೆ ವಿಶೇಷ ಹೆಲಿಕಾಪ್ಟರ್ ನೀಡಲು ಸಮ್ಮಿತಿಸಿತು.ಸಂಜೆ 4 ಗಂಟೆ ನಂತರ ಅಂಬಿ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಲಾಯಿತು.
ಅಂತಿಮ ದರ್ಶನದ ನಂತರ ಅಭಿಮಾನಿಗಳು ಇಲ್ಲಿಯೇ ಅಂತ್ಯಸಂಸ್ಕಾರ ನಡೆಸಬೇಕೆಂದು ಪಟ್ಟು ಹಿಡಿಯಬಾರದು.ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡೇ ಸರ್ಕಾರ ಈ ಕ್ರಮ ಕೈಗೊಂಡಿದೆ.ಅಂತಿಮ ದರ್ಶನದ ನಂತರ ಮಂಡ್ಯದಲ್ಲೇ ಇಲ್ಲವೇ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಪಟ್ಟು ಹಿಡಿದರೆ ನನಗೆ ಮುಜುಗರವಾಗುತ್ತದೆ.
ಹೀಗಾಗಿ ಯಾರೊಬ್ಬರೂ ಮುಜುಗರ ಸೃಷ್ಟಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಾರದು. ಇಂಥ ಸಂದರ್ಭದಲ್ಲಿ ಎಲ್ಲರೂ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕೆಂದು ಕುಮಾರಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.