ಬೆಂಗಳೂರು, ನ.22- ನೇಪಾಳದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ನೇಪಾಳ ಹೋಟೆಲ್ ಸಂಘ(ಎಚ್ಎಎನ್)ದಿಂದ ನೇಪಾಳ ಪ್ರವಾಸೋದ್ಯಮ ಮಂಡಳಿ ಸಹಯೋಗದಲ್ಲಿ ಬಿ2ಬಿ ಸಭೆ ಮತ್ತು ನೇಪಾಳ ಕುರಿತು ವಿವರ ನೀಡುವ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗಿತ್ತು.
ಭಾರತ ಮತ್ತು ನೇಪಾಳ ಪ್ರವಾಸೋದ್ಯಮದ ಪ್ರಮುಖ ವ್ಯಕ್ತಿಗಳನ್ನು ಒಂದುಗೂಡಿಸುವುದು ಮತ್ತು ಈ ಕ್ಷೇತ್ರದಲ್ಲಿ ವ್ಯವಹಾರ ಅವಕಾಶಗಳನ್ನು ಉತ್ತಮ ಪಡಿಸುವುದು ಈ ಕಾರ್ಯಕ್ರಮದ ಗುರಿಯಾಗಿತ್ತು.ಈ ಕಾರ್ಯಕ್ರಮಕ್ಕೆ ಭಾರತೀಯ ಹೋಟೆಲ್ ಅಸೋಸಿಯೇಷನ್, ದಿಲ್ಲಿಯಲ್ಲಿನ ನೇಪಾಳ ರಾಯಭಾರ ಕಚೇರಿ ಮತ್ತು ನೇಪಾಳ ಏರ್ಲೈನ್ಸ್ ಬೆಂಬಲ ನೀಡಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದವು.
ನೇಪಾಳ ಪ್ರವಾಸೋದ್ಯಮ, ಆತಿಥ್ಯ ಉದ್ಯಮದಲ್ಲಿನ ಸ್ಪರ್ಧಾತ್ಮಕತೆ ಮತ್ತು ಅವಕಾಶಗಳು ಅಲ್ಲದೆ, ಇಲ್ಲಿನ ನೂತನ ಅನುಭವಗಳ ಬಗ್ಗೆ ಸಭೆಯಲ್ಲಿ ಗಮನಹರಿಸಲಾಯಿತು.
ನೇಪಾಳ ಅನನ್ಯವಾದ ಭೌಗೋಳಿಕ ವೈವಿಧ್ಯತೆ ಹೊಂದಿದ್ದು, ಇಲ್ಲಿನ ನಿಸರ್ಗ ಅಪಾರ ಆಕರ್ಷಣೆ ಹೊಂದಿದೆ.ಜೊತೆಗೆ ಏಳು ಯುನೆಸ್ಕೊ ವಿಶ್ವ ಪರಂಪರೆ ಸ್ಥಳಗಳನ್ನು ಕಠ್ಮಂಡು ಹೊಂದಿದ್ದು, ಎರಡು ವಿಶ್ವ ಪರಂಪರೆ ಆದ್ಯಪ್ರವರ್ತಕ ರಾಷ್ಟ್ರೀಯ ಉದ್ಯಾನವನಗಳನ್ನು ಹಿಮಾಲಯ ಮತ್ತು ಥೆರೈಗಳಲ್ಲಿ ಹೊಂದಿದೆ.
ಹಿಂದೂ ಮತ್ತು ಬೌದ್ಧ ಮತ ಅನುಯಾಯಿಗಳಿಗೆ ಅತ್ಯಂತ ಪವಿತ್ರ ಎನಿಸಿದ ಪಶುಪತಿನಾಥ ದೇವಸ್ತಾನ ಮತ್ತು ಬುದ್ಧನ ಜನ್ಮಸ್ಥಾನವಾದ ಲುಂಬಿನಿಗಳು ನೇಪಾಳದಲ್ಲಿವೆ. ರಿವರ್ ರ್ಯಾಪ್ಟಿಂಗ್ಗೆ ಅತ್ಯಾಕರ್ಷಕ ರಭಸದ ನದಿಗಳು ಇಲ್ಲಿವೆ. ಜೊತೆಗೆ ಜಂಗಲ್ ಸಫಾರಿಗಳು ವಿಶೇಷ ಆಕರ್ಷಣೆಯಾಗಿವೆ.
ಈಗ ನೇಪಾಳ ಏರ್ಲೈನ್ಸ್ ಬೆಂಗಳೂರಿಗೆ ವಾರದಲ್ಲಿ ಮೂರು ನೇರ ಹಾರಾಟಗಳನ್ನು ಆರಂಭಿಸಿದ್ದು, ಪ್ರವಾಸೋದ್ಯಮಕ್ಕೆ ಮತ್ತಷ್ಟು ಅನುಕೂಲವಾಗಿದೆ.