ಮಂಡ್ಯ: ಖಾಸಗಿ ಬಸ್ ನಾಲೆಗೆ ಉರುಳಿ 15 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ ವಿಸಿ ನಾಲೆಯಲ್ಲಿ ನಡೆದಿದೆ.
ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ ನಾಲೆಗೆ ಉರುಳಿದೆ ಎನ್ನಲಾಗಿದೆ. ಭೀಕರ ಅಪಘಾತದಲ್ಲಿ ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಶವಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಲೆಗೆ ಯಾವುದೇ ತಡೆಗೋಡೆ ಇರಲಿಲ್ಲ ಎನ್ನಲಾಗಿದೆ. ಈ ಮಾರ್ಗದಲ್ಲಿ ಯಾವುದೇ ಸರ್ಕಾರಿ ಬಸ್ಗಳ ಸೌಲಭ್ಯವಿಲ್ಲ. ಖಾಸಗಿ ಬಸ್ಗಳು ಮಾತ್ರ ಸಂಚರಿಸುತ್ತವೆ.
ಪಾಂಡವಪುರದಿಂದ ಶಿವಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿತ್ತು. ಬಸ್ನಲ್ಲಿ ಹೆಚ್ಚಾಗಿ ಶಾಲಾ ಮಕ್ಕಳು ಇದ್ದರು ಎನ್ನಲಾಗಿದೆ. ಮೃತರೆಲ್ಲರೂ ಅಕ್ಕಪಕ್ಕದ ಊರಿನವರೇ ಎನ್ನಲಾಗಿದೆ. ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಾಲೆಯಲ್ಲಿ ಬಿದ್ದಿರುವ ಮೃತದೇಹಗಳನ್ನು ಸ್ಥಳೀಯ ಯುವಕರು ಹೊರತೆಗೆಯುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಸಿಎಂ ಸೂಚನೆ
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಕನಗನಮರಡಿ ಬಳಿ ವಿ.ಸಿ. ನಾಲೆಗೆ ಬಸ್ ಬಿದ್ದು 15 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಕುರಿತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ.
ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸುವ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ.