ಆಂಟಿಗುವಾ: ಟಿ20 ಮಹಿಳಾ ವಿಶ್ವಕಪ್ನ ಗ್ರೂಪ್ ಸ್ಟೇಜ್ನಲ್ಲಿ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ವನಿತೆಯರು ಆಘಾತಕಾರಿ ಸೋಲನುಭವಿಸಿದರು. ನಾರ್ಥ್ ಸೌಂಡ್ನ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು ಭಾರತೀಯರು ಮಂಡಿಯೂರಿದರು. ಭಾರತ ಮಹಿಳಾ ತಂಡ ಗಳಿಸಿದ 112 ರನ್ ಮೊತ್ತಕ್ಕೆ ಪ್ರತಿಯಾಗಿ ಆಂಗ್ಲರ ಪಡೆಯು 8 ವಿಕೆಟ್ ಹಾಗೂ 17 ಬಾಲ್ ಕೈಲಿರುಂತೆಯೇ ಗೆಲುವಿನ ಗುರಿ ಮುಟ್ಟಿತು. ಇದರೊಂದಿಗೆ ಫೈನಲ್ ತಲುಪಿದ ಇಂಗ್ಲೆಂಡ್ ವನಿತೆಯರು ಟಿ20 ಚಾಂಪಿಯನ್ಪಟ್ಟಕ್ಕಾಗಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತೀಯ ಮಹಿಳಾ ತಂಡವು ಉತ್ತಮ ಆರಂಭ ಪಡೆಯಿತು. ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗೆಸ್ ಮತ್ತು ನಾಯಕಿ ಹರ್ಮಾನ್ಪ್ರೀತ್ ಕೌರ್ ಉತ್ತಮವಾಗಿ ಆಡಿದರು. ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದ್ದ ಭಾರತ ತಂಡ 14ನೇ ಓವರ್ನಿಂದ ದಿಢೀರ್ ಪತನಕ್ಕೆ ಅಡಿಯಿಟ್ಟಿತು. ಭಾರತೀಯರು ಕೇವಲ 112 ರನ್ಗೆ ಆಲೌಟ್ ಆಯಿತು.
ಅಲ್ಪ ಮೊತ್ತದ ಗುರಿ ಹೊತ್ತ ಇಂಗ್ಲೆಂಡ್ ಮಹಿಳಾ ತಂಡ 24 ರನ್ನಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಾಗ ರೋಚಕ ಹಣಾಹಣಿಯ ಸಾಧ್ಯತೆ ಕಾಣುತ್ತಿತ್ತು. ಆದರೆ, ಆಮಿ ಜೋನ್ಸ್ ಮತ್ತು ನಟಾಲೀ ಸ್ಕೈವರ್ ಅವರು ಸಮಯೋಚಿತ ಪ್ರದರ್ಶನ ನೀಡಿ ಭಾರತಕ್ಕಿದ್ದ ಸಣ್ಣ ಗೆಲುವಿನ ಆಸೆಗೂ ತಣ್ಣೀರೆರಚಿದರು. ಗ್ರೂಪ್ ಸ್ಟೇಜ್ನಲ್ಲಿ ಆಸ್ಟ್ರೇಲಿಯಾವನ್ನೂ ಸೋಲಿಸಿದ್ದ ಭಾರತದ ಮಹಿಳೆಯರು ಸೆಮಿಫೈನಲ್ನಲ್ಲಿ ಇಷ್ಟು ಹೀನಾಯ ಸೋಲನುಭವಿಸುವ ನಿರೀಕ್ಷೆ ಇರಲಿಲ್ಲ.
ನ. 25ರಂದು ಫೈನಲ್ ಪಂದ್ಯ ನಡೆಯಲಿದ್ದು, ಪ್ರಶಸ್ತಿಗಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ನಿನ್ನೆ ನಡೆದ ಮೊದಲ ಸೆಮಿಫೈನಲ್ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಮಹಿಳಾ ಪಡೆಯನ್ನು ಆಸ್ಟ್ರೇಲಿಯನ್ನರು ಬರೋಬ್ಬರಿ 71 ರನ್ನುಗಳಿಂದ ಬಗ್ಗುಬಡಿದಿದ್ದರು.
ಸ್ಕೋರು ವಿವರ:
ಭಾರತ ಮಹಿಳಾ ತಂಡ 19.3 ಓವರ್ 112 ರನ್ ಆಲೌಟ್
(ಸ್ಮೃತಿ ಮಂಧಾನ 34, ಜೆಮಿಮಾ ರಾಡ್ರಿಗೆಸ್ 26, ಹರ್ಮಾನ್ಪ್ರೀತ್ ಕೌರ್ 16, ತನಿಯಾ ಭಾಟಿಯಾ 11 ರನ್ – ಹೀದರ್ ನೈಟ್ 9/3, ಕರ್ಸ್ಟೀ ಗಾರ್ಡಾನ್ 20/2, ಸೋಫೀ ಎಕ್ಕಲ್ಸ್ಟೋನ್ 22/2)
ಇಂಗ್ಲೆಂಡ್ ಮಹಿಳಾ ತಂಡ 17.1 ಓವರ್ 116/2
(ಅಮಿ ಜೋನ್ಸ್ ಅಜೇಯ 53, ನಟಾಲೀ ಸ್ಕಿವರ್ ಅಜೇಯ 52 ರನ್)