ಟಿ10 :ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಭಾರತದ ಪ್ರವೀಣ್ ತಾಂಬೆ

ದುಬೈ: ದುಬೈನಲ್ಲಿ ನಡೆಯುತ್ತಿರುವ ಚೊಚ್ಚಲ ಟಿ10 ಕ್ರಿಕೆಟ್ ಲೀಗ್ ಹಲವಾರು ಅಚ್ಚರಿಗಳನ್ನ ನೀಡಿದೆ.

ಈ ಹೊಡಿ ಬಡಿ ಅಟದಲ್ಲಿ ಮೊನ್ನೆಯಷ್ಟೆ ಅಫ್ಘಾನಿಸ್ಥಾನ ತಂಡದ ಮೊಹ್ಮದ್ ಶೆಹಜಾದ್ ಸಿಂಧೀಸ್ ವಿರುದ್ಧ ಕೇವಲ 16 ಎಸೆತದಲ್ಲಿ 74 ರನ್ ಬಾರಿಸಿ ಹೊಸ ದಾಖಲೆ ಬರೆದಿದ್ದರು. ಇದೀಗ ಭಾರತದ ಸ್ಪಿನ್ನರ್ ಪ್ರವೀಣ್ ತಾಂಬೆ ಹ್ಯಾಟ್ರಿಕ್ ವಿಕೆಟ್ ಪಡೆದು ಟೂರ್ನಿಯಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಜೊತೆಗೆ ಒಟ್ಟು 15 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.

47 ವರ್ಷದ ಪ್ರವೀಣ್ ತಾಂಬೆ ಕೇರಳ ನೈಟ್ಸ್ ವಿರುದ್ಧ ಪಂದ್ಯದ ಮೊದಲ ಒವರ್ ಎರಡನೇ ಎಸೆತದಲ್ಲಿ ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್ ಗೇಲ್ ಅವರನ್ನ ಔಟ್ ಮಾಡಿದ್ರು. ನಂತರ ನಾಲ್ಕನೆ ಎಸೆತದಲ್ಲಿ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, ಐದನೇ ಎಸೆತದಲ್ಲಿ ವೆಸ್ಟ್‍ಇಂಡೀಸ್ ತಂಡದ ಕಿರಾನ್ ಪೊಲಾರ್ಡ್ ಮತ್ತು ಆರನೇ ಎಸೆತದಲ್ಲಿ ಫಾಬಿಯನ್ ಅಲೆನ್ ಅವರ ವಿಕೆಟ್ ಉರುಳಿಸಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು.

ಆರಂಭಿಕ ಆಘಾತ ಹೊರತಾಗಿಯೂ ಕೇರಳ ನೈಟ್ಸ್ ನಿಗದಿತ 10 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು. ನಂತರ ಶೇನ್ ಸಿಂಧಿಸ್ ತಂಡ ಶೇನ್ ವಾಟ್ಸ್‍ನ್ ಅವರ ಅರ್ಧ ಶತಕದ ನೆರವಿನಿಂದ ಸಿಂಧಿಸ್ ತಂಡದ 9 ವಿಕೆಟ್‍ಗಳ ಸುಲಭ ಗೆಲುವು ಪಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ