ಬೆಂಗಳೂರ,ನ.23- ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಯಾರಾದರೂ ತರಗತಿಗಳಲ್ಲಿ ಮೊಬೈಲ್ ಬಳಸಿದರೆ ಅಂಥವರಿಗೆ ಕಠಿಣ ಶಿಕ್ಷೆ ಹಾಗೂ ಮೊಬೈಲ್ ಜಪ್ತಿ ಮಾಡಲಾಗುತ್ತದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಇಂಥದ್ದೊಂದು ಕಠಿಣವಾದ ನಿಯಮ ಜಾರಿ ಮಾಡಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಪದವಿ ಪೂರ್ವ ಶಿಕ್ಷಣ ಮಂಡಳಿ ಹೊರಡಿಸಿರುವ ನೂತನ ಅಧಿಸೂಚನೆಯಂತೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ.
ಸಿ.ಎಂ. ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಪದವಿಪೂರ್ವ ಶಿಕ್ಷಣ ಮಂಡಳಿಯು ಅಧಿಸೂಚನೆ ಹೊರಡಿಸಿದೆ.
ಮಕ್ಕಳ ಏಕಾಗ್ರತೆ, ವಿದ್ಯಾರ್ಥಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್, ಲಾಪ್ಟಾಪ್ ಬಳಕೆ ಮಾಡುವುದಕ್ಕೆ ನಿರ್ಬಂಧ ಹಾಕಲಾಗಿದೆ.
ಇತ್ತೀಚಿನ ದಿನಗಳಲ್ಲಿ ತರಗತಿ ವೇಳೆಯೇ ವಿದ್ಯಾರ್ಥಿಗಳು ಮೊಬೈಲ್ ಮೂಲಕ ವಾಟ್ಸಪ್, ಫೇಸ್ಬುಕ್, ಶೇರ್ಚಾಟ್ನಲ್ಲಿ ಕಾಲಹರಣ ಮಾಡುತ್ತಿದ್ದು, ಪರಿಣಾಮ ಕಲಿಕಾ ಸಾಮಥ್ರ್ಯ ಕುಂಠಿತವಾಗಿ ಏಕಾಗ್ರತೆಯೂ ಇಲ್ಲದಂತಾಗಿತ್ತು. ಹೀಗಾಗಿ ಸರ್ಕಾರ ತರಗತಿಗಳಲ್ಲಿ ಮೊಬೈಲ್ ಮತ್ತು ಲಾಪ್ಟಾಪ್ ಬಳಕೆ ಮಾಡುವುದಕ್ಕೆ ನಿರ್ಬಂಧ ಹಾಕಿದೆ.
ಪದವಿ ಪೂರ್ವ ಶಿಕ್ಷಣ ಮಂಡಳಿಯ ಈ ಸುತ್ತೋಲೆಗೆ ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಲಯದಿಂದ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಮೊಬೈಲ್ ಬಳಕೆ ನಿಷೇಧ ಒಪ್ಪಬಹುದಾದರೂ ಲ್ಯಾಪ್ ಟಾಪ್ ಬಳಕೆ ನಿಷೇಧಿಸಿರುವುದು ಸರಿಯಲ್ಲವೆಂಬ ಮಾತುಗಳು ಕೇಳಿ ಬರುತ್ತಿದೆ.
ಉಪನ್ಯಾಸಕರಿಗೆ ಪ್ರತ್ಯೇಕ ಲಾಕರ್:
ಇನ್ನು ತರಗತಿಯ ಪಾಠಪ್ರವಚನದ ವೇಳೆ ಉಪನ್ಯಾಸಕರು, ಪ್ರಾಂಶುಪಾಲರು, ಶಿಕ್ಷಕರು, ಸಹಶಿಕ್ಷಕರು, ದೈಹಿಕ ಶಿಕ್ಷಕರು ಸೇರಿದಂತೆ ಯಾರೊಬ್ಬರೂ ಮೊಬೈಲ್ ಬಳಕೆ ಮಾಡಬಾರದೆಂಬ ದೃಷ್ಟಿಯಿಂದ ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಪ್ರತ್ಯೇಕ ಲಾಕರ್ ತೆಗೆಯಲು ಸೂಚಿಸಲಾಗಿದೆ.
ತರಗತಿಗಳಲ್ಲಿ ಪಾಠ ಮಾಡುವ ವೇಳೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಸದಂತೆ ಶಿಕ್ಷಕರಿಗೂ ಸಹ ನಿರ್ಬಂಧ ಹಾಕಲಾಗಿದೆ. ಒಂದು ವೇಳೆ ಮೊಬೈಲ್ ತಂದರೂ ಬೆಳಗ್ಗೆ ತರಗತಿ ಆರಂಭವಾಗುವ ಸಮಯದಲ್ಲಿ ಎಲ್ಲರೂ ಕಡ್ಡಾಯವಾಗಿ ಲಾಕರ್ನಲ್ಲಿ ಇಡಬೇಕು. ನಂತರ ಸಂಜೆ ಇದನ್ನು ತೆಗೆದುಕೊಂಡು ಹೋಗಬೇಕೆಂದು ಸೂಚಿಸಲಾಗಿದೆ.