ಅಂಡಮಾನ್: ಅಂಡಮಾನ್ ದ್ವೀಪದಲ್ಲಿ ಹತ್ಯೆಗೀಡಾದ ಅಮೆರಿಕಾದ ಪ್ರವಾಸಿಗ ಜಾನ್ ಅಲೆನ್ ಚೌನನ್ನು ಕ್ರೈಸ್ತ ಧಾರ್ಮಿಕ ಸಂಘಟನೆಯೊಂದು ‘ಕ್ರೈಸ್ತ ಹುತಾತ್ಮ’ ಎಂದು ಬಣ್ಣಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದೆ.
ಜಾನ್ ಅಲೆನ್ ಚೌ ಬುಡಕಟ್ಟು ಜನಾಂಗದವರ ಮತಾಂತರಕ್ಕಾಗಿ ಅಂಡಮಾನ್ ನ ನಿಗೂಢ ದ್ವೀಪಕ್ಕೆ ತೆರಳಿದ್ದ ಎಂಬ ಮಾಹಿತಿ ಹಿನ್ನಲೆಯಲ್ಲೇ ಇಸ್ರೇಲ್ ಮೂಲದ ಕ್ರೈಸ್ಥ ಧಾರ್ಮಿಕ ಸಂಘಟನೆ ‘ಕೋವೆನೆಂಟ್ ಜರ್ನಿ’ ಜಾನ್ ಅಲೆನ್ ಚೌ ನನ್ನು ಕ್ರೈಸ್ಥ ಹುತಾತ್ಮ ಎಂದು ಕರೆದಿದೆ.
ಈ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ (https://www.covenantjourney.org/details/john-allen-chau) ನಲ್ಲಿ ಸಂಸ್ಥೆ ಸುಧೀರ್ಘ ಲೇಖನ ಬರೆದಿದ್ದು, ಜಾನ್ ಅಲೆನ್ ಚೌ ಮತ್ತು ಆತನ ಜೀಸಸ್ ಪ್ರೇಮದ ಕುರಿತು ಲೇಖನ ಪ್ರಕಟಿಸಿದೆ.
ಅಲ್ಲದೇ ವೆಬ್ ಸೈಟ್ ತನ್ನ ಲೇಖನದಲ್ಲಿ ‘ಸೆಂಟಿನೆಲ್ ದ್ವೀಪದಲ್ಲಿರುವ ಬುಡಕಟ್ಟು ಜನಾಂಗದವರೊಂದಿಗೆ ಏಸುವಿನ ಪ್ರೀತಿ ಹಂಚಲು ಜಾನ್ ತೆರಳಿದ್ದ ಎಂದು ಬರೆಯಲಾಗಿದೆ.
ನವೆಂಬರ್ 15ರಂದೇ ಸೆಂಟಿನೆಲ್ ದ್ವೀಪದಲ್ಲಿ ಜಾನ್ ಮೇಲೆ ಬಿಲ್ಲುಬಾಣಗಳ ಮೂಲಕ ದಾಳಿಯಾಗಿತ್ತು. ಆದರೆ ಆತ ಕೈಯಲ್ಲಿ ಹಿಡಿದಿದ್ದ ಪವಿತ್ರ ಬೈಬಲ್ ಪುಸ್ತಕಕ್ಕೆ ಬಿಲ್ಲು ತಾಗಿ ಆತ ಪ್ರಾಣಾಪಾಯದಿಂದ ಪಾರಾಗಿದ್ಜ. ಆ ಮೂಲಕ ಬೈಬಲ್ ಆತನ ಪ್ರಾಣ ಉಳಿಸಿತ್ತು. ಅಂದು ಜಾನ್ ಆ ದ್ವೀಪವನ್ನು ತೊರೆದಿದ್ದ. ಆದರೆ ನವೆಂಬರ್ 18ರಂದು ಮತ್ತೆ ಮೀನುಗಾರರ ಸಹಾಯದಿಂದ ದ್ವೀಪಕ್ಕೆ ತೆರಳಿದ್ದ ಜಾನ್ ನನ್ನು ಅಲ್ಲಿನ ಬುಡಕಟ್ಟು ಜನಾಂಗದವರು ಬಿಲ್ಲುಬಾಣಗಳ ಮೂಲಕ ದಾಳಿ ಮಾಡಿದ್ದರು. ಈ ವೇಳೆ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಜಾನ್ ಮೃತದೇಹಕ್ಕೆ ಬುಡಕಟ್ಟು ಜನಾಂಗದವರು ಹಗ್ಗ ಕಟ್ಟಿ ಎಳೆದುಕೊಂಡು ಹೋಗುತ್ತಿರುವುದನ್ನು ಮೀನುಗಾರರು ನೋಡಿದ್ದಾರೆ ಎಂದು ಕೋವೆನೆಂಟ್ ಜರ್ನಿ ತನ್ನ ಸುದೀರ್ಘ ಲೇಖನದಲ್ಲಿ ಬರೆದುಕೊಂಡಿದೆ. ಅಲ್ಲದೇ ಜಾನ್ ಅಲೆನ್ ಚೌ ಕುರಿತ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ.
ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ಪ್ರವಾಸಿಗ ಅಂಡಮಾನ್ ನಲ್ಲಿ ಮತಾಂತರ ಮಾಡುತ್ತಿರಲಿಲ್ಲ ಎಂದು ಹೇಳಿದೆ. ಪ್ರವಾಸಿಗ ಜಾನ್ ಅಲೆನ್ ಚೌ ಮಿಷನರಿ ಕಾರ್ಯದಲ್ಲಿ ತೊಡಗಿದ್ದ ಎಂಬ ವರದಿಗಳನ್ನು ನಿರಾಕರಿಸಿರುವ ಕೇಂದ್ರ ಗೃಹ ಇಲಾಖೆ, ಪ್ರವಾಸಿಗ ಮತಾಂತರ ಚಟುವಟಿಕೆಗಳಲ್ಲಿ ತೊಡಗಿದ್ದ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ ಆದರೆ ಆತ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿದೆ, ಆತ ಎಲ್ಲಾ ದೃಷ್ಟಿಯಿಂದಲೂ ಸೂಕ್ಷ್ಮವಾದ ಪ್ರದೇಶಕ್ಕೆ ತೆರಳಿ ಆಪತ್ತನ್ನು ಆಹ್ವಾನಿಸಿಕೊಂಡ ಎಂದು ಹೇಳಿಕೆ ನೀಡಿದೆ.
Andaman ,American tourist, Sentinelese Island,john allen chau