ಬೆಂಗಳೂರು, ನ.23- ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡಲು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬಿಜಿಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿ ಕ್ಯಾಂಪಸ್ನ ಆವರಣದಲ್ಲಿಂದು ಹಮ್ಮಿಕೊಂಡಿದ್ದ 11ನೆ ಸಂಸ್ಥಾಪನಾ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ-2018ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡಲು ಅಗತ್ಯವಿರುವ ಸೌಲಭ್ಯ ಒದಗಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಪೆÇೀಷಕರಿಗೆ ಎಷ್ಟೇ ಕಷ್ಟಗಳಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ನಾಡಿಗೆ ಉತ್ತಮ ಪ್ರಜೆಗಳನ್ನು ನೀಡಬೇಕು. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದಿ ಚುಂಚನಗಿರಿ ಮಠದ ಅಧೀನದಲ್ಲಿ 500ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. 1.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಭೆರವೈಕ್ಯ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಶಿಕ್ಷಣ, ಆರೋಗ್ಯ, ಪರಿಸರ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಉತ್ತಮ ಕೊಡುಗೆಗಳನ್ನು ನೀಡಿದ್ದು, ಈ ಪರಂಪರೆಯನ್ನು ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಬೃಹತ್ ಆಲದ ಮರದ ರೀತಿಯಲ್ಲಿ ನಾಡಿಗೆ ಮತ್ತು ಸಮಾಜಕ್ಕೆ ಶ್ರೀಮಠದ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ನೀಡುತ್ತಿವೆ. ಬಾಲಗಂಗಾಧರನಾಥ ಸ್ವಾಮೀಜಿಯವರ ದೂರದೃಷ್ಟಿಯಿಂದ ಗ್ರಾಮೀಣ ಭಾಗದ ಮಕ್ಕಳಿಗೆ, ಬಡವ, ಶ್ರೀಮಂತ ಎಂಬ ತಾರತಮ್ಯವಿಲ್ಲದೆ ಶಿಕ್ಷಣ ನೀಡುತ್ತಾ ಬಂದಿದೆ. ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ವಿಶಿಷ್ಟ ಧಾರ್ಮಿಕ ಸೆಳೆತವಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟರೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಸಹಕಾರ ನೀಡಬೇಕು ಎಂದು ಹೇಳಿದರು.
ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಂಸ್ಕಾರವಂತ ಸಮಾಜ ನಿರ್ಮಾಣಕ್ಕೆ ಹಾಗೂ ಸಾಮಾಜಿಕ ಅಭ್ಯುದಯಕ್ಕೆ ಶ್ರಮಿಸಿದ ಮಹಾನ್ ಪುರುಷರು. ಒಕ್ಕಲುತನ ಮಾಡುವವರ ಕಷ್ಟ ಪರಿಹಾರಕ್ಕೆ ಸಾಕಷ್ಟು ಶ್ರಮ ವಹಿಸಿದ್ದರು. ಒಕ್ಕಲುತನ ಸಮಾಜವನ್ನು ಸ್ವಾಭಿಮಾನ ಸಮಾಜವನ್ನಾಗಿ ಮಾಡಲು ಅಹರ್ನಿಶಿ ಪ್ರಯತ್ನಿಸಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಅವರ ಮಾರ್ಗದಲ್ಲಿ ನಾವೆಲ್ಲಾ ಮುನ್ನಡೆಯಬೇಕು ಕರೆ ನೀಡಿದರು.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಹೀರೋ ಆಗಲು ಚಲನಚಿತ್ರಗಳೇ ಬೇಕಾಗಿಲ್ಲ. ನಿಜ ಜೀವನದಲ್ಲಿಯೂ ಸಮಾಜ ಸೇವೆಗಳನ್ನು ಮಾಡುವ ಮೂಲಕ ಹೀರೋ ಆಗಬಹುದು ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪುಟ್ಟರಾಜು ಹಾಗೂ ಕೆ.ಎಸ್. ಕುಮಾರಸ್ವಾಮಿ ಅವರಿಗೆ ಬಿಜಿಎಸ್ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟ ಉಪೇಂದ್ರ ಲೇಸರ್ ಶೋ ಪ್ರದರ್ಶನ ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಇದಕ್ಕೂ ಮುನ್ನ ವೈಭವಯುತ ರಥದಲ್ಲಿ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆಯನ್ನು ವೇದಿಕೆಗೆ ತರಲಾಯಿತು. ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಂಸ್ಥೆಯ ವ್ಯವಸ್ಥಾಪಕ ಶ್ರೀ ಪ್ರಕಾಶನಾಥ ಸ್ವಾಮೀಜಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಇತರ ಗಣ್ಯರನ್ನು ರಥದಲ್ಲಿ ವೇದಿಕೆಗೆ ಕರೆ ತರಲಾಯಿತು.
ಸಂಸದ ಎಲ್.ಆರ್.ಶಿವರಾಮೇಗೌಡ, ನಿರ್ಮಾಪಕ ಕೆ.ಮಂಜು, ಎಂಪಿಐ ನಿರ್ದೇಶಕ ಡಾ.ಗಂಗಾಧರ, ಗ್ಲೋಬಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರವೀಂದ್ರನಾಥ್ ಮತ್ತಿತರರು ಪಾಲ್ಗೊಂಡಿದ್ದರು. ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು.