ಬೆಂಗಳೂರು, ನ.23-ಸ್ತನ ಕ್ಯಾನ್ಸರ್, ಪೆÇ್ರಸ್ಟೇಟ್ ಕ್ಯಾನ್ಸರ್ ಮತ್ತಿತರ ಕ್ಯಾನ್ಸರ್ಗಳಿಗಿಂತ ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ಹೆಚ್ಚು ಸಾವು-ನೋವಿಗೆ ಕಾರಣವಾಗಿದೆ.
ನಮ್ಮ ದೇಶದಲ್ಲಿ ಕ್ಯಾನ್ಸರ್ ಕ್ಷಿಪ್ರಗತಿಯಲ್ಲಿ ಮಹಾಮಾರಿಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಹಳ ತಡವಾಗಿ ರೋಗ ಪತ್ತೆ ಮಾಡುವುದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮ್ ಆಸ್ಪತ್ರೆಯ ಕ್ಯಾನ್ಸರ್ ರೋಗಶಾಸ್ತ್ರದ ಹಿರಿಯ ಸಲಹಾ ತಜ್ಞ ಮತ್ತು ರಕ್ತ ಕ್ಯಾನ್ಸರ್ ರೋಗ ತಜ್ಞ ಡಾ.ನಿತಿ ರೈಜಾದ್, ಶ್ವಾಸಕೊಶದ ಕ್ಯಾನ್ಸರ್ ರೋಗಿಗಳು ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ವಾಸ್ತವವಾಗಿ ಎದೆಯ ಎಕ್ಸ್-ರೇ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಮಾತ್ರ ರೋಗ ಪತ್ತೆಯಾಗುತ್ತದೆ ಎಂದು ತಿಳಿಸಿದರು.
ಶ್ವಾಸಕೋಶದ ಕ್ಯಾನ್ಸರ್ಅನ್ನು ಆರಂಭದ ಹಂತದಲ್ಲಿಯೇ ಪತ್ತೆ ಮಾಡಬೇಕಾದರೆ ಏಕೈಕ ಕ್ರಮ ಲೋ ಡೋಸ್ ಹೆಲಿಕಲ್ ಲಂಗ್ಸಿಟಿ ಆಗಿರುತ್ತದೆ. ಇದರಲ್ಲಿನ ಉನ್ನತ ಸ್ಪಷ್ಟತೆಯ ಚಿತ್ರಗಳು ಆರಂಭದ ಹಂತದ ಶ್ವಾಸಕೋಶದಲ್ಲಿನ ಕ್ಯಾನ್ಸರ್ ಗಡ್ಡೆಗಳನ್ನು ಗುರುತಿಸುತ್ತವೆ ಎಂದು ಹೇಳಿದರು.
ನಗರದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ವಿಶ್ವವ್ಯಾಪಿಯಾಗಿ ನವೆಂಬರ್ ತಿಂಗಳನ್ನು ಶ್ವಾಸಕೋಶದ ಕ್ಯಾನ್ಸರ್ ಜಾಗೃತಿ ಮಾಸ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಯಾನ್ಸರ್ ಶಸ್ತ್ರಕ್ರಿಯಾ ಸಲಹಾ ತಜ್ಞರಾದ ಡಾ.ಸೂರಜ್ ಮಂಜುನಾಥ್ ಮಾತನಾಡಿ, ಎಲ್ಲ ಕ್ಯಾನ್ಸರ್ಗಳ ಪೈಕಿ ಶ್ವಾಸಕೋಶದ ಕ್ಯಾನ್ಸರ್ನಿಂದಾಗಿ ಹೆಚ್ಚಿನ ಸಂಖ್ಯೆಯ ಸಾವು-ನೋವು ಕಾಣುತ್ತೇವೆ. ಜಾಗತಿಕವಾಗಿ ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್ ಪೈಕಿ ಶೇ.14.5ರಷ್ಟು ಮತ್ತು ಮಹಿಳೆಯರ ಪೈಕಿ ಶೇ.8.4ರಷ್ಟು ಶ್ವಾಸಕೋಶದ ಕ್ಯಾನ್ಸರ್ ಹೊಂದಿರುತ್ತಾರೆ ಎಂದು ತಿಳಿಸಿದರು.
ಧೂಮಪಾನದಿಂದ ಅತಿ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಕಂಡುಬರುತ್ತದೆ. ಅಡುಗೆ ಮಾಡುವ ಇದ್ದಿಲು ಒಲೆಯ ಹೊಗೆಯಿಂದ ಮಹಿಳೆಯರಲ್ಲಿ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಇದೆ. ಶ್ವಾಸಕೋಶದ ಕ್ಯಾನ್ಸರ್ಗೆ 50 ರಿಂದ 59 ವರ್ಷ ಸಾಮಾನ್ಯ ವಯೋಮಿತಿಯಾಗಿದೆ ಎಂದು ಹೇಳಿದರು.
ಶ್ವಾಸಕೋಶ ರೋಗ ಸಲಹಾ ಮತ್ತು ಎದೆಭಾಗದ ತಜ್ಞ ವೈದ್ಯ ಡಾ.ಕೆ.ಎಸ್.ಸತೀಶ್, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸೋಮೇಶ್ ಮಿತ್ತಲ್ ಮಾತನಾಡಿದರು.