ಸವೇಯರ್ಗಳ ನೇಮಕಕ್ಕೆ ಒತ್ತಾಯ

ಬೆಂಗಳೂರು, ನ.23- ಪಾಲಿಕೆಯ ಐದು ವಲಯ ವ್ಯಾಪ್ತಿಯಲ್ಲಿನ ಆಸ್ತಿಗಳು ಖಾಸಗಿ ಬಡಾವಣೆಗಳಲ್ಲಿನ ನಾಗರಿಕ ಸೌಲಭ್ಯಗಳಿಗಾಗಿ ಕಾಯ್ದಿರಿಸಿರುವ ಆಸ್ತಿ ನಿವೇಶನಗಳನ್ನು ಗುರುತಿಸಿ ಸರ್ವೆ ನಡೆಸಿ ಪಾಲಿಕೆ ವಶಕ್ಕೆ ಪಡೆಯಲು ಸರ್ವೆಯರ್‍ಗಳನ್ನು ನೇಮಿಸಲು ತುರ್ತುಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಆಯುಕ್ತರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಬಿಬಿಎಂಪಿ ಪುನರ್‍ವಿಂಗಡಣೆ ನಂತರ ಐದು ಹೊಸ ವಲಯ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸೌಲಭ್ಯ ಕಲ್ಪಿಸಲು ಜಾಗ ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಈ ವ್ಯಾಪ್ತಿಯಲ್ಲಿ ಬಿಬಿಎಂಪಿ ಆಸ್ತಿಗಳು, ಉಳಿಕೆಯಾಗದಿರುವ ಸರ್ಕಾರದ ಆಸ್ತಿಗಳು ಹಾಗೂ ಖಾಸಗಿ ಬಡಾವಣೆಗಳ ನಾಗರಿಕ ಸೌಲಭ್ಯಗಳಿಗಾಗಿ ಕಾಯ್ದಿರಿಸಿರುವ ಜಾಗ, ನಿವೇಶನಗಳನ್ನು ಗುರುತಿಸಿ ಪಾಲಿಕೆ ವಶಕ್ಕೆ ಪಡೆಯಲು ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ನಾಗರಿಕ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ, ಆಯಾ ವಲಯ ವ್ಯಾಪ್ತಿ ಕೆರೆಗಳ ಒತ್ತುವರಿ ಸರ್ವೆ, ಬೃಹತ್ ಯೋಜನೆಗಳಿಗೆ ಸಂಬಂಧಿಸಿದಂತೆ ಭೂ ಸ್ವಾಧೀನಕ್ಕೆ ಒಳಪಡುವ ಸರ್ವೆ ಮುಂತಾದವುಗಳ ಕಾರ್ಯ ನಿರ್ವಹಿಸಲು ಸರ್ವೇಯರ್‍ಗಳನ್ನು ನಿಯೋಜಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ