ಬೆಂಗಳೂರು, ನ.22- ವಿಧಾನಸೌಧದ ಮುಂದಿರುವ ಅಂಬೇಡ್ಕರ್ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಆರು ಬೋಗಿಗಳಿರುವ ಮೆಟ್ರೋದ ಮೂರನೇ ರೈಲಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಸೇರಿ ಮುಖ್ಯಮಂತ್ರಿ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ನಮ್ಮ ಮೆಟ್ರೋ ಕಳೆದ ವರ್ಷದ ಜೂನ್ 22ರಂದು ಒಂದು ಮೆಟ್ರೋ ರೈಲಿಗೆ ಆರು ಭೋಗಿಗಳನ್ನು ಅಳವಡಿಸಿ ಚಾಲನೆ ನೀಡಲಾಗಿತ್ತು, 2018ರ ಅಕ್ಟೋಬರ್ 4ರಂದು ಎರಡನೇ ರೈಲಿಗೆ ಆರು ಭೋಗಿಗಳನ್ನು ಅಳವಡಿಸಿ ಚಾಲನೆ ನೀಡಲಾಗಿತ್ತು. ಈಗ ಮೂರನೇ ರೈಲಿಗೆ ಆರು ಭೋಗಿಗಳನ್ನು ಅಳವಡಿಸಲಾಗಿದೆ.
ನಾಲ್ಕನೇ ರೈಲಿಗೆ ಈಗಾಗಲೇ ಭೋಗಿಗಳನ್ನು ಅಳವಡಿಸಲಾಗಿದ್ದು, ಪರಿಕ್ಷಾರ್ಥ ಸಂಚಾರ ನಡೆಸುತ್ತಿದೆ.ಇನ್ನು ಹದಿನೈದು ದಿನಗಳಲ್ಲಿ ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುತ್ತದೆ.
ಆರು ಭೊಗಿಗಳನ್ನು ಅಳವಡಿಸುವ ರೈಲುಗಳು ಪೂರ್ವ ಮತ್ತು ಪಶ್ಚಿಮದ ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಉತ್ತರ-ದಕ್ಷಿಣ ಭಾಗದ ಹಸಿರು ಮಾರ್ಗದ ಮೆಟ್ರೋ ರೈಲುಗಳಿಗೂ ಆರು ಭೋಗಿಗಳನ್ನು ಅಳವಡಿಸಬೇಕೆಂಬ ಬೇಡಿಕೆಗಳು ಹೆಚ್ಚಾಗಿದ್ದು, ಈಗಾಗಲೇ ಒಂದು ಹಸಿರು ಮಾರ್ಗದ ರೈಲಿಗೆ ಆರು ಭೋಗಿಗಳನ್ನು ಅಳವಡಿಸಲು ಕಾರ್ಯಾರಂಭ ನಡೆಸಲಾಗಿದೆ. ಬಹುತೇಕ ಡಿಸೆಂಬರ್ ತಿಂಗಳ ವೇಳೆಗೆ ಹಸಿರು ಮಾರ್ಗದಲ್ಲೂ ಆರು ಭೋಗಿಗಳ ರೈಲು ಸಂಚರಿಸಲಿವೆ.
ಆರು ಭೋಗಿಗಳ ಅಳವಡಿಕೆಯಿಂದ ಶೇ.15ರಷ್ಟು ಇಂಧನ ಉಳಿತಾಯವಾಗುತ್ತಿದೆ. ಆರು ಭೋಗಿಗಳಲ್ಲೂ ಪ್ರತ್ಯೇಕ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಪ್ರತ್ಯೇಕ ಎಲ್ಸಿಡಿಗಳನ್ನು ಅಳವಡಿಸಲಾಗಿದ್ದು, ಇದು ಜಾಹೀರಾತಿಗಾಗಿ ಮೀಸಲಿಡಲಾಗಿದೆ.
ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಂಆರ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಅಜಯ್ಸೇಠ್, ನೇರಳೆ ಮಾರ್ಗದಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಿದ್ದು, ಬೆಳಗ್ಗೆ ಮತ್ತು ಸಂಜೆ ಪೀಕ್ ಹವರ್ನಲ್ಲಿ ಸುಮಾರು 19 ಸಾವಿರ ಜನ ಪ್ರಯಾಣ ಮಾಡುತ್ತಾರೆ.ಈ ಭಾಗಕ್ಕೆ ಆರು ಭೋಗಿಗಳನ್ನು ಅಳವಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ.ಮೂರು ಭೋಗಿಗಳ ಮೆಟ್ರೋದಲ್ಲಿ ಸುಮಾರು 750 ಮಂದಿ ಆರಾಮವಾಗಿ ಪ್ರಯಾಣ ಮಾಡಬಹುದು.ಇನ್ನು ಆರು ಭೋಗಿಗಳನ್ನು ಅಳವಡಿಸುವುದರಿಂದ 1574 ಮಂದಿ ಪ್ರಯಾಣಿಸಬಹುದಾಗಿದೆ.ಸ್ವಲ್ಪ ಇಕ್ಕಟ್ಟಿನಲ್ಲಿ ಹೊಂದಾಣಿಕೆ ಮಾಡುಕೊಳ್ಳುವುದಾದರೆ ಎರಡು ಸಾವಿರ ಜನ ಪ್ರಯಾಣಿಸಬಹುದು ಎಂದರು.
ಹಸಿರು ಮಾರ್ಗದಲ್ಲಿ ಪೀಕ್ ಹವರ್ನಲ್ಲಿ 10ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ. ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಿಂತಲೂ ಜನ ವಸತಿ ಪ್ರದೇಶ ಹೆಚ್ಚಿದೆ. ಈ ಮಾರ್ಗದ ರೈಲುಗಳಿಗೂ ಹಂತ ಹಂತವಾಗಿ ಆರು ಭೋಗಿಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಬಿಇಎಂಎಲ್ ಪ್ರತಿ ತಿಂಗಳು ಮೂರರಿಂದ ನಾಲ್ಕು ಭೋಗಿಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಆಗಸ್ಟ್ ವೇಳೆಗೆ ನಮ್ಮ ಮೆಟ್ರೋದ ಎಲ್ಲಾ ರೈಲುಗಳನ್ನು ಆರು ಭೋಗಿಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಅಜಯ್ಸೇಠ್ ಅವರು ಹೇಳಿದರು.
ನಮ್ಮ ಮೆಟ್ರೋದ ಎಲ್ಲಾ ರೈಲುಗಳ ಮೊದಲ ಕೋಚ್ನಲ್ಲಿ ಮಹಿಳೆಯರಿಗೆ ಮೀಸಲಿರಿಸಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.