ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನಲೆ ಇಂದು ಮತ್ತು ನಾಳೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವ

ಬೆಂಗಳೂರು, ನ.21-ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇಂದು ರಾತ್ರಿ ಹಾಗೂ ನಾಳೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಾಯುಭಾರ ಕುಸಿತ ದುರ್ಬಲವಾಗಿರುವುದರಿಂದ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿಲ್ಲ. ಹಿಂಗಾರು ಕೂಡ ಚೇತರಿಕೆ ಕಾಣುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ನಾಳೆ ಮಳೆಯಾಗುವ ಮುನ್ಸೂಚನೆಗಳಿವೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರು ವಾಯುಭಾರ ಕುಸಿತ ಚಂಡಮಾರುತವಾಗಿ ಮಾರ್ಪಡುವ ಯಾವುದೇ ಮುನ್ಸೂಚನೆಗಳಿಲ್ಲ. ಹೀಗಾಗಿ ರಾಜ್ಯದಲ್ಲಿ ಭಾರೀ ಮಳೆಯಾಗುವುದಿಲ್ಲ. ಆದರೆ ನಾಳೆ ಮೋಡ ಕವಿದ ವಾತಾರಣ ಹಾಗೂ ಮೇಲ್ಮೈ ತಂಪಾದ ಗಾಳಿ ಬೀಸುವ ಸಾಧ್ಯತೆ ಇದೆ. ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ
ಮಳೆಯಾಗಬಹುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ