ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಮೂರನೇ ಆರು ಬೋಗಿಗಳ ರೈಲು ಸೇವೆಗೆ ನಾಳೆ ಚಾಲನೆ

ಬೆಂಗಳೂರು, ನ.21- ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಮೂರನೇ ಆರು ಬೋಗಿಗಳ ರೈಲು ಸೇವೆಗೆ ನಾಳೆ ಚಾಲನೆ ದೊರೆಯಲಿದೆ.
ಮೆಟ್ರೋ ರೈಲಿಗೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೊ ರೈಲು ನಿಗಮ ಮೂರು ಬೋಗಿಗಳಿರುವ ಆರು ಬೋಗಿಗಳಿಗೆ ಹಂತ ಹಂತವಾಗಿ ವಿಸ್ತರಿಸುತ್ತಿದೆ. ಈಗಾಗಲೇ ಎರಡು ಆರು ಬೋಗಿಗಳ ರೈಲು ಸೇವೆಯನ್ನು ಪ್ರಯಾಣಿಕರಿಗೆ ಒದಗಿಸುತ್ತಿದೆ.

ವಿಧಾನಸೌಧದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ರೈಲು ನಿಲ್ದಾಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಾಳೆ ಮೂರನೇ ಆರು ಬೋಗಿಗಳ ರೈಲು ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ.

ಈಗಾಗಲೇ ಎರಡನೇ ಆರು ಬೋಗಿಗಳ ರೈಲು ನೇರಳೆ ಮಾರ್ಗದಲ್ಲಿ ಅಂದರೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ ಸಂಚರಿಸುತ್ತಿದೆ.ಇದೇ ಮಾರ್ಗದಲ್ಲಿ ಮೊದಲ ಬಾರಿಗೆ ಆರು ಬೋಗಿಗಳ ರೈಲು ಸಂಚಾರ ಆರಂಭವಾಗಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇದೇ ಮಾರ್ಗದಲ್ಲಿ ಮೂರನೇ ಆರು ಬೋಗಿಗಳ ರೈಲು ಸೇವೆಯೂ ಪ್ರಾರಂಭವಾಗುತ್ತಿದೆ.

ಮೂರು ಬೋಗಿಗಳ ರೈಲಿಗೆ ಹೋಲಿಸಿದರೆ ಶೇ.15ರಷ್ಟು ಇಂಧನ ಉಳಿತಾಯ ಮಾಡಬಹುದಾಗಿದೆ. ಸ್ವಯಂ ಚಾಲಿತ ವೆಂಟ್ ವೈಶಿಷ್ಟ್ಯ, ಸುತ್ತುವರೆದ ತಾಪಮಾನ ಸರಿಹೊಂದಿಸಲು ಬಿಸಿ ಗಾಳಿ ಮತ್ತು ಏರ್ ಕಂಡೀಷನ್ ಸಿಸ್ಟಂಗಳನ್ನು ಹೊಂದಿದೆ. ವೇರಿಯಬಲ್ ವೋಲ್ಟೇಜ್ ಮತ್ತು ವೇರಿಯಬಲ್ ಫ್ರೀಕ್ವೆನ್ಸಿಗಾಗಿ ರಿಮೋಟ್ ಬೇರ್ಪಡಿಸುವ ವೈಶಿಷ್ಟ್ಯಗಳ ಮೂಲಕ ಟ್ರೈನ್ ಮ್ಯಾನೇಜ್‍ಮೆಂಟ್ ಸಿಸ್ಟಂ ಇರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಪೆಂಡೆಂಟ್ ಕಂಟ್ರೋಲ್ ಆಪರೇಷನ್ ಮೂಲಕ ಪ್ರತ್ಯೇಕ 6 ಕಾರ್ ರೈಲುಗಳಲ್ಲಿ 3 ಘಟಕಗಳನ್ನು ಚಲಿಸಲು ಸ್ವಯಂ ಶಕ್ತಿ ಹೊಂದಿರುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ