
ಬೆಂಗಳೂರು, ನ.21-ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರುಕ್ ಅವರು ನಿಧನರಾಗಿದ್ದಾರೆ.
ಇವರ ಮೃತದೇಹವನ್ನು ಹೆಬ್ಬಾಳ ಫ್ಲೈ ಓವರ್ ಬಳಿ ಇರುವ ನಾರಾಯಣ ಗ್ರಾಮದ ಕ್ವಾಟ್ರರ್ಸ್ ನಂ.1ರಲ್ಲಿ ಇಡಲಾಗಿದೆ. ಅಂತಿಮ ದರ್ಶನದ ನಂತರ ಇವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಜಯಮಹಲ್ ಬಳಿ ಇರುವ ಮುಸಲ್ಮಾನ ರುದ್ರಭೂಮಿಯಲ್ಲಿ ಇಂದು ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಮೂಲತಃ ಕಾಸರಗೋಡು ಜಿಲ್ಲೆಯ ಪುತ್ತೂರು ತಾಲೂಕಿನ ಮುಗರಾಯಿ ಗ್ರಾಮದವರಾದ ಇವರು ಕಾಸರಗೋಡು ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು.
ನಗರದ ರೇಣುಕಾಚಾರ್ಯ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಅವರು, 1968ರಲ್ಲಿ ವಕೀಲ ವೃತ್ತಿ ಆರಂಭಿಸಿದರು.
ಜೂನ್ 1975 ರಿಂದ 1986ರ ವರೆಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕರ್ತವ್ಯ ನಿರ್ವಹಿಸಿದ ಅವರು 1986ರಿಂದ ಸರ್ಕಾರಿ ಹೆಚ್ಚುವರಿ ವಕೀಲರಾಗಿ ಸೇವೆ ಸಲ್ಲಿಸಿದರು.
1992ರಲ್ಲಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಅವರು, 1994ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದರು. 1995ರಲ್ಲಿ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ನ್ಯಾ.ಎ.ಎಂ.ಫಾರುಕ್ ಅವರ ನಿಧನಕ್ಕೆ ವಿವಿಧ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಸಂತಾಪ ಸೂಚಿಸಿದ್ದಾರೆ.