ಬೆಂಗಳೂರು, ನ.21-ಪ್ರಧಾನಿ ನರೇಂದ್ರ ಮೋದಿ ಚೌಕಿಧಾರ ಎಂದು ಹೇಳುವ ಮೂಲಕ ಅವರೇ ದೊಡ್ಡ ಮೋಸಗಾರರಾಗಿದ್ದಾರೆ. ದೇಶಕ್ಕೆ ಮೋದಿ ಕೊಡುಗೆ ಏನು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ದ್ಠಿನನಿತ್ಯ ಕಾಶ್ಮೀರದಲ್ಲಿ ಹಿಂಸಾಕೃತ್ಯ ನಡೆಯುತ್ತಿದೆ. ಪಾಕಿಸ್ತಾನಕ್ಕೆ ಆಹ್ವಾನ ನೀಡದಿದ್ದರೂ ಭೇಟಿ ಕೊಟ್ಟರು. ಆದರೆ ಮನ್‍ಮೋಹನ್‍ಸಿಂಗ್ ಅವರು ಹಿಂಸಾಕೃತ್ಯ ನಿಲ್ಲುವವರೆಗೂ ಪಾಕಿಸ್ತಾನಕ್ಕೆ ಭೇಟಿ ನೀಡುವುದಿಲ್ಲ ಎಂದು ಹೇಳಿ ಅದೇ ರೀತಿ ನಡೆದುಕೊಂಡಿದ್ದರು ಎಂದು ಹೇಳಿದರು.
ಅಂಬೇಡ್ಕರ್ ರೂಪಿಸಿರುವ ಸಂವಿಧಾನವನ್ನು ಬದಲಿಸುವ ಬಗ್ಗೆ ತಮ್ಮ ಮುಖಂಡರು ಹೇಳಿಕೆ ನೀಡಿದ್ದರು. ಪ್ರಧಾನಿ ಮೌನ ವಹಿಸಿದ್ದಾರೆ. ಜನರ ಮನಸ್ಸು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನೀವು ಹೀಗೇ ಇರಬೇಕು, ಇದನ್ನೇ ತಿನ್ನಬೇಕು ಎಂದು ಜನರ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಲೋಕಸಭಾ ಅಭ್ಯರ್ಥಿಗೆ ಅತಿ ಹೆಚ್ಚಿನ ಲೀಡ್ ಕೊಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು. ಶಕ್ತಿ ಕಾರ್ಯಕ್ರಮದಡಿ ಆಧಾರ್ ಲಿಂಕ್ ಮಾಡಿದರೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ನೇರವಾಗಿ ಸಂಪರ್ಕ ಬರಲಿದ್ದಾರೆ. ಬಿಜೆಪಿಯವರು ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಸುಳ್ಳು ಹೇಳುವ ಕೆಲಸ ಮಾಡಿದ್ದಾರೆ. ದೇಶದ ಎಲ್ಲಾ ಕಡೆ ವಾತಾವರಣ ಕಲುಷಿತಗೊಂಡಿದೆ. ಬಡವರ ಪರ ದನಿ ಕ್ಷೀಣವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಮಾತನಾಡಿ, ವಾರ್ಡ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದು ಅಗತ್ಯವಾಗಿದೆ. ಕೆಳಹಂತದಲ್ಲಿ ಪಕ್ಷವನ್ನು ಸಂಘಟಿಸಬೇಕು. ಬೆಂಗಳೂರಿನ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಬೇಕು ಎಂದರು.
ವಿಸಿಟಿಂಗ್ ಕಾರ್ಡ್‍ಗಾಗಿ ಹುದ್ದೆ ತೆಗೆದುಕೊಳ್ಳಬೇಡಿ. ಪಕ್ಷದ ಗೆಲುವಿಗೆ ಶ್ರಮಿಸಬೇಕು, ಕಾರ್ಯಕರ್ತರು ಪಕ್ಷದ ಭದ್ರಬುನಾದಿ. ದೇಶದಲ್ಲಿ ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಗ್ಯಾಸ್, ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಇವರ ಆಡಳಿತದಲ್ಲಿ ರೈಲು ಅಪಘಾತಗಳು ಹೆಚ್ಚಾಗಿವೆ. ಬಿಜೆಪಿಯವರ ಲೂಟಿ ಕಡಿಮೆ ಮಾಡಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.