ದುಬೈ: ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಮಧ್ಯವರ್ತಿ ಹಾಗೂ ಬ್ರಿಟಿಷ್ ಉದ್ಯಮಿ ಕ್ರಿಶ್ಚಿಯನ್ ಜೇಮ್ಸ್ ಮೈಕಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ದುಬೈ ಹೈಕೋರ್ಟ್ ಆದೇಶ ನೀಡಿದೆ.
ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಪ್ರಕರಣದ ತನಿಖೆ ಸಂಬಂಧ ಮೈಕಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಭಾರತ ಸರ್ಕಾರ ಮನವಿ ಮಾಡಿತ್ತು. ಈ ಹಿನ್ನಲೆಯಲ್ಲಿ ಕೆಳಹಂತದ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್, ಮೈಕಲ್ ಪರ ವಕೀಲರು ಸಲ್ಲಿಸಿರುವ ಅರ್ಜಿಯನ್ನು ರದ್ದುಪಡಿಸಿ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂದು ತಿಳಿಸಿದೆ.
ಇಟಲಿ ಮೂಲದ ಫಿನ್ಮೆಕನಿಕಾದ ಬ್ರಿಟನ್ನ ಅಂಗಸಂಸ್ಥೆ ಅಗಸ್ಟಾ ವೆಸ್ಟ್ಲ್ಯಾಂಡ್ನಿಂದ ಗಣ್ಯರ ಸಂಚಾರಕ್ಕೆಂದು 12 ‘ಎಡಬ್ಲ್ಯೂ-101’ ಕಾಪ್ಟರ್ಗಳನ್ನು ಖರೀದಿಸುವ ಒಪ್ಪಂದಕ್ಕೆ 2007ರಲ್ಲಿ ಭಾರತ ಸಹಿ ಹಾಕಿತ್ತು. ನಂತರ ಈ ಒಪ್ಪಂದದಲ್ಲಿ 3,227 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಒಪ್ಪಂದ ಕುದುರಿಸುವ ಸಲುವಾಗಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ಪಾವತಿಸಲಾಗಿದೆ ಎಂಬ ಆರೋಪವಿತ್ತು. ಬಳಿಕ 2014ರ ಜನವರಿಯಲ್ಲಿ ಕೇಂದ್ರ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿತ್ತು.ಈ ಹಗರಣಕ್ಕೆ ಸಂಬಂಧಿಸಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ಸೇರಿದಂತೆ 72 ಜನರನ್ನು ಬಂಧಿಸಲಾಗಿತ್ತು.
AgustaWestland case, Dubai court orders, extradition of middleman Christian Michel to India