ಸಕ್ಕರೆ ಪ್ಯಾಕ್ಟರಿಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಾಗಿದ್ದ ಬಾಕಿ ಹಣದ ಪೈಕಿ 2000 ಕೋಟಿ ವಸೂಲಿ ಮಾಡಿ ರೈತರಿಗೆ ಸಂದಾಯ

ಬೆಂಗಳೂರು, ನ.20- ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾಗಿದ್ದ ಬಾಕಿ ಹಣದ ಪೈಕಿ ಸುಮಾರು 2ಸಾವಿರ ಕೋಟಿಗಳನ್ನು ವಸೂಲಿ ಮಾಡಿ ರೈತರಿಗೆ ಕೊಡಿಸಲಾಗಿದೆ. ಇನ್ನು 58 ಕೋಟಿ ರೂ.ನಷ್ಟು ಬಾಕಿ ಉಳಿದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಕ್ಕರೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ವಿಧಾನಸೌಧದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವೇಳೆಗೆ ಸರ್ಕಾರ ಕಾರ್ಖಾನೆಗಳು ಸುಮಾರು 2ಸಾವಿರ ಕೋಟಿ ರೂ.ನಷ್ಟು ಹಣ ಬಾಕಿ ಉಳಿಸಿಕೊಂಡಿದ್ದವು. ಮುಖ್ಯಮಂತ್ರಿಗಳು ನಿರಂತರವಾಗಿ ಸಭೆ ನಡೆಸಿ ಸಕ್ಕರೆ ಇಲಾಖೆ ಆಯುಕ್ತರು ನಿರಂತರ ಪ್ರಯತ್ನ ಪಟ್ಟಿದ್ದರ ಫಲವಾಗಿ ಬಹುತೇಕ ಎಲ್ಲಾ ಬಾಕಿ ಹಣ ವಸೂಲಿ ಆಗಿದೆ.ಈ ವರ್ಷ 38 ಕೋಟಿ ಮತ್ತು ಹಿಂದಿನದ್ದು 20 ಕೋಟಿ ಸೇರಿ 58 ಕೋಟಿ ಮಾತ್ರ ಬಾಕಿ ಉಳಿದಿದೆ.ಇನ್ನೂ ಹೆಚ್ಚಿನ ಹಣ ಬಾಕಿ ಉಳಿದಿದೆ ಎಂದು ಆರೋಪಿಸುತ್ತಿರುವವರು ಸೂಕ್ತ ದಾಖಲಾತಿಗಳನ್ನು ಕೊಡಲಿ.ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಕೊಡಿಸಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಹೇಳಿದರು.

ಕಾಂಗ್ರೆಸ್‍ನ ಕೆಲವು ಶಾಸಕರು, ಸಚಿವರು ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳು ರೈತರ ಹಣ ಬಾಕಿ ಉಳಿಸಿಕೊಂಡಿವೆ ಎಂಬ ಆರೋಪದ ಬಗ್ಗೆಯೂ ನಾನು ಚರ್ಚೆ ಮಾಡಿದ್ದೇನೆ. ಸಂಬಂಧಿಸಿದ ಶಾಸಕರು ಮತ್ತು ಸಚಿವರ ಜತೆ ಮಾತನಾಡಿದ್ದೇನೆ. ನಾವು ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಈ ವರ್ಷದ ಎಲ್ಲಾ ಹಣವನ್ನು ಪಾವತಿ ಮಾಡಲಾಗಿದೆ. ಹಿಂದಿನ ಬಾಕಿ ಇದ್ದರೆ ಕೊಡಿಸುವುದಾಗಿಯೂ ಒಂದಿಬ್ಬರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕನಿಷ್ಠ ಬೆಂಬಲ ಬೆಲೆ ನಿಗದಿ ವಿಷಯದಲ್ಲಿ ರೈತರಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದೇವೆ. ಕೇಂದ್ರ ಸರ್ಕಾರ ಪ್ರತಿ ಟನ್‍ಗೆ 2750ರೂ. ದರ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಸ್ಥಳೀಯ ಇಳುವರಿ ಹಾಗೂ ಉಪ ಉತ್ಪನ್ನಗಳನ್ನು ಆಧರಿಸಿ ಅಂತಿಮ ದರ ನಿಗದಿ ಮಾಡಲಿದೆ. ಈಗಾಗಲೆ ಈ ಬಗ್ಗೆ ವರದಿ ಸಿದ್ದಗೊಂಡಿದೆ. ಸಕ್ಕರೆ ಕಾರ್ಖಾನೆಗಳ ಅಭಿಪ್ರಾಯವನ್ನು ಕೇಳಿದ್ದೇವೆ. ಕೂಡಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಸಕ್ಕರೆ ಕಾರ್ಖಾನೆಗಳಿಂದ 58ಕೋಟಿಗೂ ಮೇಲ್ಪಟ್ಟ ಹಣ ಬಾಕಿ ಉಳಿದಿದ್ದರೆ ಅದನ್ನು ವಸೂಲಿ ಮಾಡಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ರಾಜಕಾರಣಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳಿದ್ದರೂ ಮುಲಾಜು ನೋಡುವುದಿಲ್ಲ. ಸದ್ಯಕ್ಕೆ ಜಿಲ್ಲಾಧಿಕಾರಿಗಳು ನೀಡುವ ಮಾಹಿತಿ ಆಧರಿಸಿ ನಾನು ಹೇಳುತ್ತಿದ್ದೇನೆ. ಒಂದು ವೇಳೆ ಅದು ತಪ್ಪಿದ್ದರೆ ಸೂಕ್ತ ದಾಖಲೆಗಳನ್ನು ಕೊಡಿ, ಪರಿಶೀಲಿಸುತ್ತೇನೆ ಎಂದು ಜಾರ್ರ್ಜ್ ಹೇಳಿದರು.

ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಯಲ್ಲಿ ಈಗಲೂ ನಂ.1 ಸ್ಥಾನದಲ್ಲಿದೆ. ನಾವಿಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸಿದ್ದೇವೆ. ಸುಲಭವಾಗಿ ವ್ಯವಹಾರ ನಡೆಸಲು ವೇದಿಕೆ ಸೃಷ್ಟಿಸಿದ್ದೇವೆ. ಮಹೇಂದ್ರ ಕಂಪೆನಿ, ಏಷ್ಯನ್ ಪೇಂಟ್ ಸೇರಿದಂತೆ ಬೃಹತ್ ಕಂಪೆನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿವೆ. ಕೈಗಾರಿಕಾಭಿವೃದ್ಧಿಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಸೃಷ್ಟಿಸುವಲ್ಲಿ ನಮ್ಮ ಸರ್ಕಾರ ಪ್ರಯತ್ನವನ್ನು ಮುಂದುವರೆಸುತ್ತಿದೆ. ಈ ಹಿಂದೆಯೂ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಮತ್ತು ಪ್ರಿಯಾಂಕ್ ಖರ್ಗೆ ಅವರು ಉತ್ತಮ ಕೆಲಸ ಮಾಡಿದ್ದಾರೆ.ನಾನು ಅದನ್ನು ಮುಂದುವರೆಸುವುದಷ್ಟೇ ಬಾಕಿ ಉಳಿದಿದೆ.ಶೀಘ್ರವೇ ಮುಖ್ಯಮಂತ್ರಿ ನೇತೃತ್ವದಲ್ಲಿ ಕೈಗಾರಿಕೆಗಳ ಮಂಜೂರಾತಿಗೆ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ