ಬೆಂಗಳೂರು, ನ.19- ಜೆನೆಟಿಕ್ ಮತ್ತು ಸ್ಟೆಮ್ ಸೆಲ್ ಥೆರಪಿಯಿಂದ ವಂಶವಾಹಿ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಕುಲಪತಿ ಡಾ. ಸಚ್ಚಿದಾನಂದ ಹೇಳಿದ್ದಾರೆ.
ಅಗರವಾಲ್ ಆಸ್ಪತ್ರೆ, ಜೀನ್ ಸಂಶೋಧನಾ ಸಂಸ್ಥೆ, ಜೀನ್ ಮತ್ತು ಸ್ಟೆಮ್ ಸೆಲ್ ಥೆರಪಿ ಕುರಿತು ನಿಮಾನ್ಸ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಂಶವಾಹಿ ರೋಗಗಳನ್ನು ಪತ್ತೆ ಹಚ್ಚಲು ಜೆನೆಟಿಕ್ ಥೆರಪಿಯಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಜೆನೆಟಿಕ್ ಥೆರಪಿ ಸಂಶೋಧನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ವಂಶ ಪಾರ್ಯಂಪರ್ಯವಾಗಿ ಬರುವ ರೋಗಗಳನ್ನು ತಡೆಗಟ್ಟಲು ಪ್ರಯತ್ನಿಸಬೇಕು ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಅಂತಾರಾಷ್ಟ್ರೀಯ ಜೆನೆಟಿಕ್ ತಜ್ಞರಾದ ಟೊರೆಂಟೊದ ಡಾ.ಆರ್ಮಾನ್ ಕೇಟಿಂಗ್, ಡಾ.ಜಾನ್ ಕ್ರಿಡ್ಮನ್, ನೆದರ್ಲ್ಯಾಂಡ್ನ ಡಾ.ಬೊರಿಸ್ ಕ್ರಮೇರ್, ಲಂಡನ್ನಿನ ಡಾ.ರಘುವಿಂದರ್ ಗಂಭೀರ್ ಜೆನೆಟಿಕ್ ಸಂಶೋಧನೆಯಲ್ಲಿ ಆಗಿರುವ ಬೆಳವಣಿಗೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಗರವಾಲ್ ಆಸ್ಪತ್ರೆಯ ಪಂಕಜ್ ಸೋಂಧಿ, ಸುಮಾರು 800 ವಿದ್ಯಾರ್ಥಿಗಳು ಹಾಗೂ 200 ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.