ಬೆಂಗಳೂರು, ನ.19- ರೈತ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಯಡಿಯೂರು ವಾರ್ಡ್ನಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೌರವಿದ್ಯುತ್ ಘಟಕ ಹಾಗೂ ಮಾಲಿಗಳ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಮೇಲೆ ಗೂಂಡಾಗಿರಿ ಮಾಡುವುದು ಸರಿಯಾದ ಕ್ರಮವಲ್ಲ. ಅವರ ಜತೆ ಸೌಜನ್ಯದಿಂದ ಮಾತನಾಡಿ ಅವರ ಕಷ್ಟ, ಸುಖಗಳನ್ನು ಆಲಿಸುವುದು ಮುಖ್ಯಮಂತ್ರಿಗಳ ಕರ್ತವ್ಯ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಿಎಂ ವರ್ತನೆ ನೋಡಿದರೆ ಸರ್ಕಾರ ಅಧಃಪತನಕ್ಕೆ ಮುನ್ಸೂಚನೆಯಾದಂತಿದೆ. ಈಗಲಾದರೂ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ರೈತರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ತಕ್ಕ ಸಾಸ್ತಿ ಎದುರಿಸಬೇಕಾಗುತ್ತದೆ ಎಂದು ಗುಡುಗಿದರು.
ತಿಂಗಳಾಂತ್ಯದೊಳಗೆ ಯಡಿಯೂರು ಜೈವಿಕ ಅನಿಕ ಘಟಕದಲ್ಲಿ ಪ್ರತಿನಿತ್ಯ 250 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಇದರಿಂದ 17 ಪಾಲಿಕೆಯ ಕಟ್ಟಡಗಳು, 13 ಉದ್ಯಾನವನಗಳು ಹಾಗೂ ಮೂರು ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿ ಇರುವ ವಿದ್ಯುತ್ ದೀಪ ಹಾಗೂ ಅಲಂಕಾರಿಕ ದೀಪಗಳನ್ನು ಬೆಳಗಿಸುವುದರೊಂದಿಗೆ ಬೆಸ್ಕಾಂ ವಿದ್ಯುತ್ ಮುಕ್ತ ವಾರ್ಡ್ ಎಂಬ ಹಿರಿಮೆಗೆ ಪಾತ್ರವಾಗುವುದಲ್ಲದೆ, ಸ್ವಾಲಂಬಿ ನೈಸರ್ಗಿಕ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಭಾರತದ ಪ್ರಪ್ರಥಮ ವಾರ್ಡ್ ಎಂಬ ಖ್ಯಾತಿಗೆ ಯಡಿಯೂರು ವಾರ್ಡ್ ಭಾಜವಾಗಲಿದೆ. ಈ ಯೋಜನೆಯು ಅನುಷ್ಠಾನಗೊಂಡ ನಂತರ ಪಾಲಿಕೆಯು ಪ್ರತಿ ತಿಂಗಳ ಪಾವತಿಸುತ್ತಿರವ 3.10ಲಕ್ಷ ರೂ.ನಷ್ಟು ವಿದ್ಯುತ್ ಶುಲ್ಕ ಸಂಪೂರ್ಣವಾಗಲಿದೆ ಎಂದರು.
ಮಾದರಿ ವಾರ್ಡ್:
ಯಡಿಯೂರು ವಾರ್ಡ್ನಲ್ಲಿ 15 ಲಕ್ಷ ಖರ್ಚು ಮಾಡಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ. ಇದರಿಂದ ಪ್ರತಿ ನಿತ್ಯ 15 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ವಾರ್ಡ್ನಲ್ಲಿರುವ ಪಾಲಿಕೆ ಕಟ್ಟಡಗಳು, ಉದ್ಯಾನವನ ಹಾಗೂ ಅಲಂಕಾರಿಕ ದೀಪಗಳ ನಿರ್ವಹಣೆಗೆ ಬಳಕೆ ಮಾಡಲಾಗುತ್ತದೆ. ಇದರಿಂದ ಪ್ರತಿ ತಿಂಗಳು ಬೆಸ್ಕಾಂಗೆ ಪಾವತಿಸಬೇಕಾದ 43 ಸಾವಿರ ರೂ. ಬಿಲ್ ಉಳಿತಾಯವಾಗಲಿದೆ. ಅದೇ ರೀತಿ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಘಟಕವನ್ನು ವಿಸ್ತರಿಸಿ 25 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು ಎಂದರು.
ಮೇಯರ್ ಗಂಗಾಂಬಿಕೆ ಮಾತನಾಡಿ, ಸೌರ ವಿದ್ಯುತ್ ಘಟಕ ಸ್ಥಾಪನೆಯಿಂದ ಬಹಳಷ್ಟು ವಿದ್ಯುತ್ ಉಳಿತಾಯವಾಗಲಿದೆ. ಈ ಕಾರ್ಯಕ್ಕೆ ಶ್ಲಾಘನೀಯ. ಇದೇ ರೀತಿ ಎಲ್ಲಾ ವಾರ್ಡ್ಗಳಲ್ಲೂ ಸೌರವಿದ್ಯುತ್ ಘಟಕ ಸ್ಥಾಪಿಸಿಕೊಳ್ಳಲು ಎಲ್ಲಾ ಸದಸ್ಯರಲ್ಲೂ ಮನವಿ ಮಾಡಲಾಗುವುದು. ಅದೇ ರೀತಿ ಮಾಲಿಗಳಿಗೆ ವಸತಿ ನಿರ್ಮಿಸಿಕೊಟ್ಟಿರುವುದು ಉತ್ತಮ ಕಾರ್ಯ. ಈ ಯೋಜನೆಯನ್ನೂ ಸಹ ಬೇರೆ ಬೇರೆ ಉದ್ಯಾನವನಗಳಲ್ಲಿ ನಿರ್ಮಾಣ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್, ಬಿಜೆಪಿ ವಕ್ತಾರ ಎನ್.ಆರ್.ರಮೇಶ್, ಬಿಬಿಎಂಪಿ(ದಕ್ಷಿಣ ವಲಯ) ಜಂಟಿ ಆಯುಕ್ತ ಡಾ.ಟಿ.ಎಚ್.ವಿಶ್ವನಾಥ್ ಸೇರಿದಂತೆ ಮತ್ತಿತರರಿದ್ದರು.