ಬೆಂಗಳೂರು, ನ.19- ಜಾನುವಾರುಗಳ ಕಾಲುಬಾಯಿ ಜ್ವರಕ್ಕೆ ನೀಡಲಾಗುತ್ತಿರುವ ಬಯೋವೆಟ್ ಕಂಪೆನಿಯ ಲಸಿಕೆ ಪರಿಣಾಮಕಾರಿಯಾಗಿದ್ದು, ಇದರಿಂದ ರೋಗ ವಾಸಿಯಾಗಿದೆ. ಆದರೆ, ಲಸಿಕೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ದುರುದ್ದೇಶ ಪೂರಿತ ಹೇಳಿಕೆ ಎಂದು ಬಯಲುಸೀಮೆ, ರೈತ ಸಂಘ, ಹಸಿರು ಸಂಘಟನೆಯ ಅಧ್ಯಕ್ಷ ಎ.ಅಶ್ವಥರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯೋವೆಟ್ ಸಂಸ್ಥೆಯ ವಿರುದ್ಧ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಹಿಂದೆಯೂ ಲಸಿಕೆ ತಯಾರಿಸುವ ಇತರೆ ಕಂಪೆನಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಬಯೋವೆಟ್ ಸಂಸ್ಥೆ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಕ ಲಸಿಕೆ ಪೂರೈಸುತ್ತಾ ಬಂದಿದೆ. ಈ ಲಸಿಕೆಯನ್ನು ನೀಡಿದ ಪರಿಣಾಮ ಲಕ್ಷಾಂತರ ಜಾನುವಾರುಗಳು ಬದುಕುಳಿದು ರೈತಾಪಿ ವರ್ಗಕ್ಕೆ ನೆರವಾಗಿದೆ. ಆದರೆ, ನಾಗರಾಜ್ ಅವರು ಇಲ್ಲ, ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಉತ್ತಮ ಲಸಿಕೆ ನೀಡುತ್ತಿರುವ ಬಯೋವೆಟ್ ಸಂಸ್ಥೆಯನ್ನು ರಾಜ್ಯದಿಂದ ಹೊರಗೆ ಕಳುಹಿಸುವ ಹುನ್ನಾರ ನಡೆಸಿದ್ದಾರೆ. ರೈತರನ್ನು ಗೊಂದಲದಲ್ಲಿ ಸಿಲುಕುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನಲಾಸಿಕಲ್ಸ್ ಸಂಸ್ಥೆ ಪರವಾಗಿ ನಾಗರಾಜ್ ಅವರು ಲಾಬಿ ನಡೆಸುತ್ತಿದ್ದಾರೆ. ಈ ಸಂಸ್ಥೆ 2013-14ರಲ್ಲಿ 7 ಕೋಟಿ ರೂ. ಮೌಲ್ಯದ ಲಸಿಕೆಯನ್ನು ನೀಡಿದ್ದರೂ ಅದು ಪರಿಣಾಮಕಾರಿಯಾಗಿರಲಿಲ್ಲ. ಇದರಿಂದ ರಾಜ್ಯದಲ್ಲಿ 14,400 ಜಾನುವಾರುಗಳು ಸಾವನ್ನಪ್ಪಿವೆ. ಇದರಿಂದ ರಾಜ್ಯ ಸರ್ಕಾರ ಮತ್ತು ರೈತರಿಗೆ ನಷ್ಟವಾಗಿದೆಯೇ ಹೊರತು ಸಂಸ್ಥೆಗೆ ನಷ್ಟವಾಗಿಲ್ಲ. ಜಾನುವಾರು ಕಳೆದುಕೊಂಡ ರೈತರಿಗೆ ರಾಜ್ಯ ಸರ್ಕಾರ 2373.9 ಲಕ್ಷ ರೂ. ಪರಿಹಾರ ನೀಡಿದೆ ಎಂದು ಅವರು ಹೇಳಿದರು.
ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಶುಸಂಗೋಪನ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ ಅವರು, ರೈತ ಸಂಘಗಳು, ಹಾಲು ಒಕ್ಕೂಟದ ಸಂಘಗಳು, ಪಶುವೈದ್ಯರು, ಪಶುವೈದ್ಯ ಇಲಾಖೆ ಹಾಗೂ ಸ್ವಯಂ ಸೇವಕರು ಶೇ.100ರಷ್ಟು ಲಸಿಕೆ ಹಾಕುವ ಗುರಿಯನ್ನು ಪೂರೈಸಬೇಕೆಂದು ಒತ್ತಾಯಿಸಿದರು.