ಸಂಧಿವಾತದ ಬಗ್ಗೆ ಅರಿವು ಮೂಡಿಸಲು ಬಂದಿದೆ ವೆಬ್‍ಸೈಟ್

ಬೆಂಗಳೂರು , ನ.18- ಸಂಧಿವಾತ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವೆಬ್‍ಸೈಟ್ ಉದ್ಘಾಟನೆ ಮಾಡಲಾಯಿತು.
ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘ ಮಿಲ್ಲರ್ಸ್ ರಸ್ತೆಯ ಎಪಿಐ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ದೆಬಾಸಿಸ್ ದಂಡಾ, ಈ ರೋಗ ನಿವಾರಣೆಗೆ ಎಲ್ಲ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸಾ ಘಟಕಗಳಿಲ್ಲ. ಸರ್ಕಾರ ಈ ರೋಗದ ಔಷಧಗಳ ಬೆಲೆ ಕಡಿಮೆ ಮಾಡಿ ಮಾಡುವಂತೆ ಒತ್ತಡ ಹೇರಬೇಕು ಎಂದು ಹೇಳಿದರು.

ವೈದ್ಯರು ಮತ್ತು ರೋಗಿಗಳ ನಡುವೆ ಹೊಸ ಸಂಬಂಧ ಸೃಷ್ಟಿಸಲು ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ದೇಶದ ಶೇಕಡಾ 20ರಷ್ಟು ಜನರಿಗೆ ಸಂಧಿವಾತ ಸಮಸ್ಯೆ ಇದೆ. ಆದರೆ ಅದಕ್ಕೆ ತಕ್ಕ ತಜ್ಞ ವೈದ್ಯರ ಕೊರತೆ ಇದೆ. ಇತ್ತೀಚಿನ ದಿನಗಳಲ್ಲಿ ರೋಗಿಗಳು ಮತ್ತು ವೈದ್ಯರ ಸಂವಾದಗಳ ಮೂಲಕ ಈ ರೋಗ ನಿವಾರಣೆಗೆ ಪೂರಕ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಭಾರತೀಯ ಪ್ರತಿಯೊಂದು ಆಹಾರವೂ ಆರೋಗ್ಯಕ್ಕೆ ಉತ್ತಮವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದನ್ನು ಬಿಟ್ಟು ಆಧುನಿಕ ಜೀವನ ಶೈಲಿಯಿಂದ ಆರೋಗ್ಯದಲ್ಲಿ ಏರು ಪೇರಾಗುತ್ತಿದೆ. ಸಂಧಿವಾತ ರೋಗಿಗಳು ಹಾಗೂ ವೈದ್ಯರು ಸೇರಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಬೇಕು. ಔಷಧ ತಯಾರಿಕೆ ಉತ್ಪಾದನಾ ವೆಚ್ಚ ಕಡಿಮೆ ಇದ್ದರೂ, ಡ್ರಗ್ಸ್ ಕಂಪನಿಗಳು ಸರ್ಕಾರಗಳನ್ನೇ ನಿಯಂತ್ರಣ ಮಾಡುವ ಶಕ್ತಿ ಹೊಂದಿವೆ. ಔಷಧಗಳ ಬೆಲೆ ಕಡಿಮೆ ಮಾಡಲು ರುಮಟಾಲಜಿ ತಜ್ಞ ವೈದ್ಯರ ಸಂಘ ಪ್ರಯತ್ನ ನಡೆಸಿದೆ ಎಂದು ಹೇಳಿದರು.

ಇದು ರಾಜ್ಯದಲ್ಲಿ ನಡೆದ ಮೊಟ್ಟಮೊದಲ ಸಂಧಿವಾತ ರೋಗಿಗಳ ಸಮಾವೇಶದಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ವಿಚಾರ ವಿನಿಮಯ ಮಾಡಿಕೊಂಡರು. ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ತುಮಕೂರು, ಮೈಸೂರು, ಕೋಲಾರ ಮುಂತಾದ ಜಿಲ್ಲೆಗಳಿಂದ ರೋಗಿಗಳು ಆಗಮಿಸಿದ್ದರು,. ರೋಗಿಗಳ ಸಮಸ್ಯಗಳಿಗೆ ತಜ್ಞ ವೈದ್ಯರು ಸೂಕ್ತ ಪರಿಹಾರದ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮ ಸಂಯೋಜನೆ ಮತ್ತು ನಿರೂಪಣೆ ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ಜಂಟಿ-ಕಾರ್ಯದರ್ಶಿ ಡಾ. ನಾಗರಾಜ. ಎಸ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಹಿರಿಯ ಸಂಧಿವಾತ ತಜ್ಞ ಡಾ.ಮಹೇಂದ್ರನಾಥ್ ಮಾತನಾಡಿ, ತಮ್ಮ 5 ದಶಕಗಳ ಅನುಭವನ್ನು ಹಂಚಿಕೊಂಡರು. ಇತ್ತೀಚಿಗೆ ಆಗಿರುವ ಸಂಶೋಧನೆಗಳಿಂದ ವಾಯು ರೋಗ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿದೆ, ಅಲೋಪಥಿ ವೈದ್ಯ ಪದ್ಧತಿಯಲ್ಲಿ ಪರಿಣಾಮಕಾರಿಯಾಗಿ ಕಾಯಿಲೆ ನಿಯಂತ್ರಣ ಸಾಧ್ಯವಿದೆ ಎಂದು ತಿಳಿಸಿದರು.

ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ. ಧರ್ಮಾನಂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಧಿವಾತ ತಜ್ಞರಾದ ಡಾ.ರಮೇಶ್ ಜೊಯಿಸ್, ಚಂದ್ರಶೇಖರ ಅವರು ರೋಗಿಗಳ ಜೊತೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ